ಬೆಂಗಳೂರು: ‘ಕೊರೊನಾ ಮೆಟ್ಟಿ ನಿಲ್ಲಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಅದರ ಜತೆಗೆ, ಅಭಿವೃದ್ಧಿ ಚಕ್ರವನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯಬೇಕಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೊರೊನಾ ಸೋಂಕಿನ ಬಗ್ಗೆ ಭಯಭೀತರಾಗುವ ಅಗತ್ಯವಿಲ್ಲ. ಜಾಗರೂಕತೆಯಿಂದ ಜೀವನ ನಡೆಸಬೇಕು. ಜಾಗ್ರತೆ ವಹಿಸದಿದ್ದರೆ ಸರ್ಕಾರದ ಯಾವ ಕ್ರಮಗಳೂ ನಿರೀಕ್ಷಿತ ಫಲ ನೀಡುವುದಿಲ್ಲ. ಆದ್ದರಿಂದ ಸರ್ಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು’ ಎಂದು ಮನವಿ ಮಾಡಿದರು.
‘ಅಭಿವೃದ್ಧಿಯೇ ಆಡಳಿತ ಮಂತ್ರ ಎಂಬ ಧ್ಯೇಯದೊಂದಿಗೆ ‘ಕಲ್ಯಾಣ ರಾಜ್ಯ’ ಕಟ್ಟುವುದೇ ನಮ್ಮ ಗುರಿ. ಕೋವಿಡ್ ಪಿಡುಗಿನ ವಿರುದ್ಧದ ಹೋರಾಟ ನಡೆಸುವ ಜತೆಗೆ ಮಹಾತ್ಮ ಗಾಂಧಿಯವರ ರಾಮರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಿ ರಾಜಧರ್ಮ ಪಾಲನೆಗೆ ನಾವು ಮುಂದಾಗಿದ್ದೇವೆ’ ಎಂದರು.
‘ಹೊಸತಾಗಿ ತಂದ ಕೈಗಾರಿಕಾಭಿವೃದ್ಧಿ ಸುಗಮಗೊಳಿಸುವ ಕಾಯ್ದೆ ಮೂಲಕ ಉದ್ಯಮಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ರೈತರು ಹಾಗೂ ಉದ್ಯಮಿಗಳಿಗೆ ಪರಸ್ಪರ ಲಾಭ ದೊರೆಯುವಂತೆ ಭೂಮಿಯನ್ನು ನೇರವಾಗಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ರಾಜ್ಯದಾದ್ಯಂತ ಉದ್ಯೋಗಾವಕಾಶ ಸೃಜಿಸುವತ್ತ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.
‘ದಾಖಲೆಯ ಮಳೆ ಮತ್ತು ಪ್ರವಾಹದ ಜೊತೆಗೆ ಬರ ಹಾಗೂ ಕೋವಿಡ್ ದೊಡ್ಡ ಸವಾಲು ತಂದೊಡ್ಡಿದೆ. ಆರ್ಥಿಕ ಹಿಂಜರಿತ, ಉದ್ಯೋಗ ಕಡಿತ ಹಾಗೂ ಬೊಕ್ಕಸಕ್ಕೆ ರಾಜಸ್ವ ನಷ್ಟ, ಸ್ತಬ್ಧವಾದ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಯಿಂದ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸಮಯದಲ್ಲೂ ಜನರಲ್ಲಿ ಭರವಸೆ ಮೂಡಿಸಲು ಸರ್ಕಾರ ಹಲವು ಕ್ರಮ ಹಾಗೂ ಉಪಕ್ರಮಗಳನ್ನು ಜಾರಿಗೊಳಿಸಿದೆ’ ಎಂದು ವಿವರಿಸಿದರು.
‘ಸುಮಾರು 11 ಜಿಲ್ಲೆಗಳು ಪ್ರವಾಹಪೀಡಿತವಾಗಿದ್ದು, ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಒಟ್ಟು ₹ 984 ಕೋಟಿ ಅನುದಾನ ಲಭ್ಯವಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿಯೇ ವಾಸ್ತವ್ಯ ಹೂಡಿ ಪರಿಸ್ಥಿತಿಯ ಅವಲೋಕನ ಹಾಗೂ ನಿರ್ವಹಣೆಯಲ್ಲಿ ನಿರತರಾಗಿದ್ದಾರೆ’ ಎಂದರು.
‘ಕೋವಿಡ್ ಕರ್ತವ್ಯನಿರತಸಿಬ್ಬಂದಿಯ ಪರಿಶ್ರಮವನ್ನು ಈ ವೇಳೆ ಕೃತಜ್ಞತೆಯಿಂದ ಸ್ಮರಿಸುತ್ತೇನೆ’ ಎಂದು ಅವರು ಹೇಳಿದರು.
*
ಮಳೆ, ನೆರೆ, ಕೊರೊನಾ ಹೀಗೆ ಎದುರಾದ ಸವಾಲುಗಳ ಎದುರು ಹಿಮ್ಮೆಟ್ಟದೆ, ಪ್ರಗತಿಯತ್ತ ದೃಢ ಹೆಜ್ಜೆಗಳನ್ನು ಇಟ್ಟಿದ್ದೇವೆ. ಅಭಿವೃದ್ಧಿಯೇ ನಮ್ಮ ಮಂತ್ರ.
-ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.