ಬೆಂಗಳೂರು: ಪ್ರಧಾನಮಂತ್ರಿ ಆವಾಸ್, ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಸೇರಿದಂತೆ ಪಾಲುದಾರಿಕೆಯ ವಸತಿ ಯೋಜನೆಗಳ ಫಲಾನುಭವಿಗಳಿಗೆ ಮೂರು ತಿಂಗಳೊಳಗೆ ಸಾಲ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಧಾನಮಂತ್ರಿ ಸ್ವನಿಧಿ, ಪ್ರಧಾನಮಂತ್ರಿ ಆವಾಸ್ ಮತ್ತು ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗುರುವಾರ ವಿಧಾನಸೌಧದಲ್ಲಿ ವಿವಿಧ ಬ್ಯಾಂಕ್ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ಕೆಲವು ಬ್ಯಾಂಕ್‌ಗಳು ವಸತಿ ಯೋಜನೆಗಳ ಫಲಾನುಭವಿಗಳಿಗೆ ಸಾಲ ಮಂಜೂರಾತಿಗೆ ವಿಳಂಬ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ವರ್ತನೆಯನ್ನು ಸಹಿಸುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾಲುದಾರಿಕೆಯಲ್ಲಿ ಕೈಗೊಂಡಿರುವ 3.46 ಲಕ್ಷ ಮನೆಗಳ ನಿರ್ಮಾಣ ಯೋಜನೆಯಡಿ 1.16 ಲಕ್ಷ ಮನೆಗಳ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ಆದರೆ, ಬ್ಯಾಂಕ್‌ಗಳು ಸಾಲ ಮಂಜೂರಾತಿ ಮಾಡುವುದು ವಿಳಂಬವಾಗುತ್ತಿರುವ ಕಾರಣದಿಂದ 19,658 ಮನೆಗಳು ಮಾತ್ರ ಪೂರ್ಣಗೊಂಡಿವೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬ್ಯಾಂಕ್‌ಗಳು 53,695 ಮನೆಗಳಿಗೆ ಮಾತ್ರ ಮಂಜೂರಾತಿ ನೀಡಿವೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪಾಲುದಾರಿಕೆ ವಸತಿ ಯೋಜನೆಗಳಿಗೆ ಬ್ಯಾಂಕ್‌ಗಳಿಂದ ಸಾಲ ಮಂಜೂರು ಮಾಡಿದ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಇದೆ ಎಂದು ಯಡಿಯೂರಪ್ಪ ಹೇಳಿದರು.
ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ನೆರವು ಕೋರಿ 2.24 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಬ್ಯಾಂಕ್‌ಗಳು ಈವರೆಗೆ 66,423 ಜನರಿಗೆ ಮಾತ್ರ ಸಾಲ ಸೌಲಭ್ಯ ಮಂಜೂರು ಮಾಡಿವೆ. ಬೀದಿಬದಿ ವ್ಯಾಪಾರಿಗಳಿಗೆ ಸಹಾಯಧನ ಮತ್ತು ಸಾಲ ಮಂಜೂರಾತಿಯಲ್ಲೂ ನಿರೀಕ್ಷಿತ ಪ್ರಗತಿ ಆಗಿಲ್ಲ. ಈ ಎರಡೂ ಯೋಜನೆಗಳಲ್ಲಿ ಶೇ 30ರಷ್ಟು ಅರ್ಜಿಗಳ ವಿಲೇವಾರಿ ಮಾತ್ರ ಆಗಿದೆ. ಈ ರೀತಿಯ ವಿಳಂಬ ಧೋರಣೆ ಅನುಸರಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು 15 ದಿನಗಳೊಳಗೆ ಆಯಾ ಜಿಲ್ಲೆಗಳ ಲೀಡ್ ಬ್ಯಾಂಕ್‌ಗಳಿಗೆ ಕಳುಹಿಸಲಾಗುವುದು. ತ್ವರಿತವಾಗಿ ಪ್ರಕ್ರಿಯೆ ಪೂರ್ಣಗೊಳಿಸಿ ಮೂರು ತಿಂಗಳೊಳಗೆ ಸಾಲ ಮಂಜೂರು ಮಾಡಬೇಕು. ಬೆಂಗಳೂರು ನಗರದಲ್ಲಿನ ಮುಖ್ಯಮಂತ್ರಿಯವರ ಒಂದು ಲಕ್ಷ ಮನೆಯ ಯೋಜನೆಯ ಫಲಾನುಭವಿಗಳಿಗೂ ಇದೇ ಕಾಲಮಿತಿಯಲ್ಲಿ ಸಾಲ ಮಂಜೂರು ಮಾಡಬೇಕು ಎಂದು ಸೂಚಿಸಿದರು.
ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ವಸತಿ ಸಚಿವ ವಿ. ಸೋಮಣ್ಣ, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕಿ ಎ.ಮಣಿಮೇಖಲೈ, ಭಾರತೀಯ ರಿಸರ್ವ್ ಬ್ಯಾಂಕ್ ಪ್ರಾದೇಶಿಕ ನಿರ್ದಶಕ ಜೋಸ್ ಜೆ. ಕಟ್ಟೂರ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.