ಕಲಬುರಗಿ: ಕಲ್ಯಾಣ ಕರ್ನಾಟಕ ಜನರ ಬಹು ದಿನಗಳ ಬಯಕೆಯಾಗಿದ್ದ ಕಲಬುರಗಿ ವಿಮಾನ ನಿಲ್ದಾಣ ಇಂದುಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರಿಂದಲೋಕಾರ್ಪಣೆಗೊಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ’ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕಲಬುರಗಿ ವಿಮಾನ ನಿಲ್ದಾಣ ಹೊಸ ಆಯಾಮ ನೀಡಲಿದೆ. ರಾಜ್ಯದ ಈಶಾನ್ಯ ಭಾಗಕ್ಕೆ ವಿಮಾನ ಯಾನ ಸಂಪರ್ಕ ಹೊಂದಿರುವುದರಿಂದ ದೇಶ, ವಿದೇಶದಿಂದ ಉದ್ಯಮಿಗಳು ಇಲ್ಲಿ ಹಣ ಹೂಡಿಕೆ ಮಾಡಲಿದ್ದಾರೆ,‘ ಎಂದು ಹೇಳಿದರು.
‘ಕಲ್ಯಾಣ ಕರ್ನಾಟಕದ ಘೋಷಣೆ ನಂತರ ಇಂದು ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಸೇವೆ ಲಭ್ಯವಾಗುತ್ತಿದ್ದು, ಇಲ್ಲಿನ ಜನರ ಹರ್ಷಕ್ಕೆ ಪಾರವೇ ಇಲ್ಲದಂತಾಗಿದೆ. ಈ ಭಾಗಕ್ಕೆ ಮುಂದಿನ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ನೀಡಿ ಕಲಬುರ್ಗಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಅಭಿವೃದ್ದಿಗೊಳಿಸಲಾಗುವುದು,‘ ಎಂದು ಭರವಸೆ ನೀಡಿದರು.
‘3.175 ಕಿ.ಮಿ. ಉದ್ದದ ರನ್ ವೇಯನ್ನು ಕಲಬುರಗಿ ವಿಮಾನ ನಿಲ್ದಾಣ ಹೊಂದಿದೆ. ರಾಜ್ಯದ 2ನೇ ಹಾಗೂ ದೇಶದ 10ನೇ ಉದ್ದದ ರನ್‌ವೇ ಇದಾಗಿದೆ. ಕಲಬುರಗಿ ಜಿಲ್ಲೆಯು ದೇಶದ ಶೇ.30 ರಷ್ಟು ತೊಗರಿ ಉತ್ಪಾದಿಸಿ ಮತ್ತು ಸಿಮೆಂಟ್ ರಫ್ತು ಮಾಡುತ್ತಿದೆ. ಆ ಮೂಲಕ ವಿಶ್ವದ ಗಮನ ಸೆಳೆದಿದೆ. ಹೀಗಾಗಿ, ಇಲ್ಲಿನ ವಿಮಾನ ನಿಲ್ದಾಣವನ್ನು ಭವಿಷ್ಯದಲ್ಲಿ ಸರಕು ಸಾಗಣೆಗೂ ಬಳಸಿಕೊಳ್ಳುವಂತೆ ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ,’ ಎಂದು ಬಿಎಸ್‌ವೈ ತಿಳಿಸಿದರು.
ಈ ವೇಳೆ ಬಿಜೆಪಿ ಮುಖಂಡರಾದ ಮುರಳಿಧರ್ ರಾವ್, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.