ADVERTISEMENT

ಆಡಳಿತ ಪಕ್ಷದವರಿಂದಲೇ CM ಬದಲಾವಣೆಗೆ ಅವಸರ: ಸಂಸದ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 10:31 IST
Last Updated 7 ಅಕ್ಟೋಬರ್ 2024, 10:31 IST
<div class="paragraphs"><p>ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ</p></div>

ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ

   

ಗದಗ: ‘ಮುಖ್ಯಮಂತ್ರಿ ಬದಲಾವಣೆಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಬಹಳಷ್ಟು ಚಟುವಟಿಕೆಗಳು ನಡೆಯುತ್ತಿವೆ. ವಿಶೇಷವಾಗಿ ಹಿರಿಯ ಸಚಿವರು ದೆಹಲಿ ಭೇಟಿ ನೀಡುವುದನ್ನು ನೋಡಿದರೆ ಇದು ಗೊತ್ತಾಗುತ್ತದೆ. ವಿರೋಧ ಪಕ್ಷಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದವರೆ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ‘ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

‘ಇದರ ಜತೆಗೆ ಸಿಎಂ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಲು ಮಾನಸಿಕವಾಗಿ ಸಿದ್ಧರಾಗುತ್ತಿದ್ದಾರೆ‘ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಮುಂದೆ ಕಾಂಗ್ರೆಸ್ ಸರ್ಕಾರ ಬರುವುದಿಲ್ಲ, ಈಗ ಸಿಎಂ ರಾಜೀನಾಮೆ ನೀಡಿದರೆ ಮುಂದೆ ನಮಗೆ ಅವಕಾಶ ಇದೆ. ಹೀಗಾಗಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಸತತ ಪ್ರಯತ್ನ ಮಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ರಾಜ್ಯದಲ್ಲಿ ಆಡಳಿತ ಸ್ಥಗಿತವಾಗಿದೆ. ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಆಗುತ್ತಿಲ್ಲ. ಇಂತಹ ಸರ್ಕಾರ ಪಡೆದಿರುವುದು ಕರ್ನಾಟಕದ ದೌರ್ಭಾಗ್ಯ’ ಎಂದು ಟೀಕಿಸಿದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಬೇರೆ ಯಾವುದೋ ಕೆಲಸಕ್ಕೆ ಭೇಟಿಯಾಗಿರಬಹುದು. ನಮ್ಮ‌ ಹೈಕಮಾಂಡ್ ಬಹಳ ಸ್ಪಷ್ಟವಾಗಿದೆ. ಈ ಸರ್ಕಾರವನ್ನು ಅಭದ್ರಗೊಳಿಸುವ ಪ್ರಶ್ನೆ ಇಲ್ಲ. ತಾತ್ವಿಕವಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟವಿದೆ’ ಎಂದರು.

ದಸರಾ ನಂತರ ಸಿಎಂ ಬದಲಾವಣೆ ಆಗುತ್ತಾರೆ ಎಂಬ ಬಿ.ವೈ. ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ವಿಜಯೇಂದ್ರ ಅವರು ಅವರ ಲೆಕ್ಕಾಚಾರದಲ್ಲಿ ಹೇಳಿದ್ದಾರೆ. ನನ್ನ ಪ್ರಕಾರ ಸಿಎಂ ರಾಜೀನಾಮೆ ನೀಡಲು ಮಾನಸಿಕವಾಗಿ ತಯಾರಿ ಆಗುತ್ತಿದ್ದಾರೆ’ ಎಂದು ಹೇಳಿದರು.

ಆದಷ್ಟು ಬೇಗ ಜಾತಿಗಣತಿ ಹೊರಬರಲಿ

ಜಾತಿಗಣತಿ ವಿಷಯವಾಗಿ ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಹೇಳಿಕೆ ಪ್ರತಿಕ್ರಿಯಿಸಿ, ‘ಹರಿಪ್ರಸಾದ್ ಅವರು ಮನದಾಳದ ಮಾತು ಹೇಳಿದ್ದಾರೆ‌. ಜಾತಿಗಣತಿ ಮುಖ್ಯವೋ ಸರ್ಕಾರ ಮುಖ್ಯವೋ ಅನ್ನುವುದನ್ನು ಬಿ.ಕೆ.ಹರಿಪ್ರಸಾದ್ ಸ್ಪಷ್ಟಪಡಿಸಲಿ. ಜಾತಿಗಣತಿ ಪ್ರಕ್ರಿಯೆ ಅಲ್ಲ, ಅದು ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಅರಿಯಲು ಮಾಡಿದ್ದು. ನಿಖರವಾಗಿ ಜಾತಿಗಣತಿಯ ಆದೇಶವಿಲ್ಲ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ ಸಮಿತಿ ಕೊಟ್ಟ ವರದಿಯನ್ನು ಏಕೆ ಸ್ವೀಕರಿಸಲಿಲ್ಲ. ಜಯಪ್ರಕಾಶ್ ಹೆಗಡೆ ಅವರು ಆಯೋಗದ ಅಧ್ಯಕ್ಷರಾಗಿ 2ರಿಂದ 3 ತಿಂಗಳಲ್ಲಿ ಹೇಗೆ ವರದಿ ಕೊಡುತ್ತಾರೆ? ಆ ವರದಿ ತೆಗೆದುಕೊಂಡು ಹಿಂದುಳಿದ ವರ್ಗ ಉದ್ಧಾರ ಮಾಡುತ್ತೇವೆ ಅಂತ ಹೇಳುತ್ತಾರೆ. ಗೊಂದಲ ಸ್ಪಷ್ಟವಾಗಬೇಕು. ವೈಜ್ಞಾನಿಕವಾಗಿ ಆಗಬೇಕು. ಹಿಂದುಳಿದವರಿಗೆ ಹೆಚ್ಚಿನ ಕಾರ್ಯಕ್ರಮಗಳು ಬರಬೇಕು. ಜಾತಿಗಣತಿ ಬಿಡುಗಡೆ ಮಾಡಿ ಅಂತ ಮೊನ್ನೆಯೇ ಹೇಳಿದ್ದೇನೆ. ವರದಿಕೊಟ್ಟು 8ರಿಂದ 10 ತಿಂಗಳಾಯಿತು ಯಾಕೆ ಇಟ್ಟುಕೊಂಡಿದ್ದಾರೆ’ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರುದ್ದ ಮುಡಾ ಹಗರಣದ ಆರೋಪ ಬಂದಮೇಲೆ ಜಾತಿ ಗಣತಿ ವರದಿ ಬಿಡುಗಡೆ ಮಾಡುವ ಬಗ್ಗೆ ಮಾತಾಡುತ್ತಾರೆ. ಜಾತಿ ಗಣತಿ ವರದಿ ಬಿಡುಗಡೆಗೆ ಅವರ ಪಕ್ಷದಲ್ಲಿ ಮೊದಲಿನಿಂದಲೂ ವಿರೋಧ ಇದೆ. ಡಿಸಿಎಂ ಡಿ.ಕೆ. ಶಿವಕುಮಾರ್, ಶಾಸಕ ಶಾಮನೂರ ಶಿವಶಂಕರಪ್ಪ ವಿರೋಧಿಸಿ ಸಹಿ ಮಾಡಿಕೊಟ್ಟಿದ್ದಾರೆ. ಅವರಲ್ಲಿಯೇ ಹೊಂದಾಣಿಕೆ, ಸ್ಪಷ್ಟತೆ ಇಲ್ಲ. ಆದಷ್ಟು ಬೇಗ ಜಾತಿಗಣತಿ ಹೊರಬಂದು ಚರ್ಚೆಯಾಗಲಿ’ ಎಂದು ಹೇಳಿದರು.

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಮರು ಸ್ಥಾಪಿಸುವ ಕುರಿತು ಕೇಳಿದ ಪ್ರಶ್ನೆಗೆ, ‘ಆ ಬಗ್ಗೆ ಮಾಹಿತಿ ಇಲ್ಲ. ಅವರು ಮೊನ್ನೆಯೇ ಹೇಳಿದ್ದಾರೆ ಮಾಡಲಿ. ನಮ್ಮ ಪಕ್ಷ ತನ್ನದೇ ಕಾರ್ಯಕರ್ತರ ಪಡೆ ಹೊಂದಿದೆ. ನಮ್ಮದು ರಾಷ್ಟ್ರೀಯ ಪಕ್ಷ’ ಎಂದು ಹೇಳಿದರು.

ಕಪ್ಪತ್ತಗುಡ್ಡದ ಜೀವ ವೈವಿಧ್ಯ ಕಾಪಾಡಬೇಕು

‘ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಜೀವ ವೈವಿಧ್ಯದಲ್ಲಿ ಅಸಮತೋಲನ ಉಂಟಾಗಿದ್ದು ಅದನ್ನು ಸರಿಪಡಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ವನ್ಯಜೀವಿ ಮಂಡಳಿ ಸಭೆ ಮಾಡಿದಾಗ ನಿಸರ್ಗವನ್ನು ಕಾಪಾಡುವ ಕೆಲಸವನ್ನು ಮಾಡಬೇಕು ಎಂದು ಹೇಳಿದ್ದೆ. ಈಗಲೂ ಕೂಡ, ಮುಖ್ಯಮಂತ್ರಿ ಕಪ್ಪತ್ತಗುಡ್ಡದ ಜೀವ ವೈವಿಧ್ಯತೆ ಕಾಪಾಡಲು ಗಣಿಗಾರಿಕೆಯಂತಹ ಚಟುವಟಿಕೆ ನಡೆಯಲು ಅವಕಾಶ ಕೊಡದೇ ಈ ಭಾಗದ ಮೂರು ನಾಲ್ಕು ಜಿಲ್ಲೆಗಳ ಪರಿಸರ ಕಾಪಾಡುವ ತೀರ್ಮಾನ ಮಾಡಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.