ADVERTISEMENT

ಸಿಎಂ–ಡಿಸಿಎಂ ಹುದ್ದೆಯ ಫೈಟ್: ನಿಲ್ಲದ ವಾಕ್ಸಮರಗಳು

ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ದೊಡ್ಡ ಗುಂಪು ಸಕ್ರಿಯವಾಗಿದೆ‘ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 0:06 IST
Last Updated 30 ಜೂನ್ 2024, 0:06 IST
<div class="paragraphs"><p>ರಾಜು ಸೇಠ್</p></div>

ರಾಜು ಸೇಠ್

   

ಚಿಕ್ಕಬಳ್ಳಾಪುರ: ‘ಕಾಂಗ್ರೆಸ್ ಈಗ ಒಡೆದ ಮನೆ. ಲೋಕಸಭೆ ಚುನಾವಣೆ ಮುಗಿಯಲಿ ಎಂದು ಕಾಯುತ್ತಿದ್ದರು. ಈಗ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ದೊಡ್ಡ ಗುಂಪು ಸಕ್ರಿಯವಾಗಿದೆ‘ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ. 

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸುವುದೇ ಡಿ.ಕೆ.ಶಿವಕುಮಾರ್ ಮತ್ತು ಗ್ಯಾಂಗ್‌ ಅಜೆಂಡಾ. ಆ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ ಎಂದರು.

ADVERTISEMENT

ಈಗ ಹತ್ತಿರದಲ್ಲಿ ಯಾವುದೇ ದೊಡ್ಡ ಚುನಾವಣೆಗಳು ಇಲ್ಲ. ಹಾಗಾಗಿ ಕಾಂಗ್ರೆಸ್‌ ದೆಹಲಿ ನಾಯಕರು ಸಹ ಸುಮ್ಮನೆ ಇದ್ದಾರೆ ಎಂದು ಅಶೋಕ ಹೇಳಿದರು.

‘ಸತೀಶ ಜಾರಕಿಹೊಳಿ ಉಪಮುಖ್ಯಮಂತ್ರಿ ಮಾಡಿ’

ಬೆಳಗಾವಿ: ‍‘ರಾಜಕಾರಣದಲ್ಲಿ ಅಪಾರ ಅನುಭವವುಳ್ಳ ಸಚಿವ ಸತೀಶ ಜಾರಕಿಹೊಳಿ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು. ಅವರಿಂದ ಈ ಭಾಗದ ಅಭಿವೃದ್ಧಿಗೆ ಅನುಕೂಲವಾಗಲಿದೆ’ ಎಂದು ಶಾಸಕ ಆಸೀಫ್ ಸೇಠ್ ಶನಿವಾರ ತಿಳಿಸಿದರು.

‘ಸತೀಶ ಅವರನ್ನು ಡಿಸಿಎಂ ಮಾಡುವಂತೆ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಪಕ್ಷದ ಹೈಕಮಾಂಡ್‌ಗೆ ಕೇಳುತ್ತಿರುವೆ. ನನ್ನ ಬೇಡಿಕೆಗೆ ಆದ್ಯತೆ ನೀಡಬೇಕು’ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಸತ್ತ ಪ್ರಾಣಿಯಂತಾದ ರಾಜ್ಯ ಸರ್ಕಾರ: ಕಾರಜೋಳ

ಚಿತ್ರದುರ್ಗ: ‘ರಾಜ್ಯ ಸರ್ಕಾರವು ಸತ್ತ ಪ್ರಾಣಿಯಂತಾಗಿದೆ. ಪ್ರಾಣಿಯ ಮೃತದೇಹವನ್ನು ಹರಿದು ತಿನ್ನಲು ರಣಹದ್ದುಗಳು ಕಿತ್ತಾಡುವ ರೀತಿಯಲ್ಲಿ ರಾಜ್ಯ ಸರ್ಕಾರದ ಮಂತ್ರಿಗಳು, ಶಾಸಕರು ಕಿತ್ತಾಡುತ್ತಿದ್ದಾರೆ’ ಎಂದು ಸಂಸದ ಗೋವಿಂದ ಕಾರಜೋಳ ಶನಿವಾರ ವ್ಯಂಗ್ಯವಾಡಿದರು.

‘ಮುಖ್ಯಮಂತ್ರಿ ಕುರ್ಚಿಗಾಗಿ ಕಚ್ಚಾಟ ಆರಂಭವಾಗಿದೆ. ಸಚಿವ, ಶಾಸಕರ ನಡುವೆ 3 ಗುಂಪು ಸೃಷ್ಟಿಯಾಗಿವೆ. ಸಿದ್ದರಾಮಯ್ಯ ಗುಂಪು, ವೀರಶೈವ ಲಿಂಗಾಯತರ ಗುಂಪು ಹಾಗೂ ದಲಿತರ ಗುಂಪುಗಳು ನಿರ್ಮಾಣವಾಗಿವೆ ಇಡೀ ರಾಜ್ಯದ ಆಡಳಿತ ಯಂತ್ರ ಕುಸಿದು ಬಿದ್ದಿದೆ’ ಎಂದು ಟೀಕಿಸಿದರು.

ಡಿಸಿಎಂ ಸಂಖ್ಯೆ ಹೆಚ್ಚಳ ಮುಗಿದ ಅಧ್ಯಾಯ: ಜಾರಕಿಹೊಳಿ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಉಪಮುಖ್ಯಮಂತ್ರಿಗಳ ಸಂಖ್ಯೆ ಹೆಚ್ಚಳ ವಿಚಾರ ಮುಗಿದ ಅಧ್ಯಾಯ. ಯಾರು ಏನೆಂದರೂ ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಬೇಕೆ ಹೊರತು ಎಲ್ಲಿ ಬೇಕೆಂದಲ್ಲಿ ಚರ್ಚೆಯಾಗಬಾರದು’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘2028ರಲ್ಲಿ ಅವಕಾಶವಿದ್ದರೆ, ನಾನು ಕೂಡ ಮುಖ್ಯಮಂತ್ರಿಯಾಗಲು ಬಯಸುವೆ. ಆಗಿನ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮದ ಬಗ್ಗೆ ಯೋಚಿಸುವೆ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಸ್ವಾಮೀಜಿಗಳು ಮಾತನಾಡುವುದು ಸೂಕ್ತವಲ್ಲ–ಚಲುವರಾಯಸ್ವಾಮಿ

ಬೀದರ್‌: ‘ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಸ್ವಾಮೀಜಿಗಳು ಮಾತನಾಡುವುದು ಸೂಕ್ತವಲ್ಲ. ‘ಇದೆಲ್ಲ ಅನವಶ್ಯಕ ಚರ್ಚೆ. ನಮ್ಮದು ರಾಷ್ಟ್ರೀಯ ಪಕ್ಷ. ಅದರ ಬಗ್ಗೆ ಹೈಕಮಾಂಡ್‌ ತೀರ್ಮಾನಿಸುತ್ತದೆ. ಮುಖ್ಯವಾಗಿ ಈಗ ಅಂತಹ ಪರಿಸ್ಥಿತಿ ಉದ್ಭವಿಸಿಲ್ಲ’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಶನಿವಾರ ಇಲ್ಲಿ ಹೇಳಿದರು.

‘ಸಿಎಂ ಹುದ್ದೆ ಬಗ್ಗೆ ಸ್ವಾಮೀಜಿಗಳು ಸಾರ್ವಜನಿಕವಾಗಿ ಮಾತನಾಡುವುದು ಸರಿನಾ ಅಥವಾ ತಪ್ಪಾ ಎನ್ನುವುದನ್ನು ಅವರೇ ನಿರ್ಧರಿಸಬೇಕು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಮೂರು ವರ್ಷಗಳಿಂದ ಅನೋನ್ಯವಾಗಿ ಕೆಲಸ ಮಾಡುತ್ತಿದ್ದಾರೆ. ಯಾವ ವಿಷಯದಲ್ಲೂ ಭಿನ್ನಾಭಿಪ್ರಾಯ ತಲೆದೋರಿಲ್ಲ’ ಎಂದು ಹೇಳಿದರು.

‘ಮುಖ್ಯಮಂತ್ರಿ ಹುದ್ದೆ ಎರಡೂವರೆ ವರ್ಷದ ಅವಧಿಗೆ ಒಪ್ಪಂದ ಆಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಹೆಚ್ಚು ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಗಾಗಿ ಸಚಿವರು ಶಾಸಕು ಅಭಿಪ್ರಾಯ ಮಂಡಿಸಿದ್ದಾರೆ. ಎಲ್ಲವನ್ನೂ ಪಕ್ಷದ ಹೈಕಮಾಂಡ್‌ ನಿರ್ಧರಿಸುತ್ತದೆ’

-ಸಂತೋಷ ಲಾಡ್ ಸಚಿವ

ಸಿಎಂ ಹುದ್ದೆ ವಿಚಾರವಾಗಿ ಚರ್ಚೆಗಳೇ ಅಪ್ರಸ್ತುತ. ಅದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ನಾನಂತೂ ಯಾವುದಕ್ಕೂ ಲಾಬಿ ನಡೆಸುತ್ತಿಲ್ಲ.

-ಈಶ್ವರ ಖಂಡ್ರೆ ಅರಣ್ಯ ಸಚಿವ

ವೀರಶೈವ ಲಿಂಗಾಯತರಿಗೆ ಸಿಎಂ ಹುದ್ದೆ ನೀಡಿ: ರಂಭಾಪುರಿ ಶ್ರೀ

ಕಲಬುರಗಿ: ‘ಮುಖ್ಯಮಂತ್ರಿ ಬದಲಾವಣೆ ಮಾಡಲೇಬೇಕಾದ ಪ್ರಸಂಗ ಬಂದರೆ ಆ ಸ್ಥಾನಕ್ಕೆ ವೀರಶೈವ ಲಿಂಗಾಯತ ಸಮುದಾಯದ ನಾಯಕರನ್ನು ‍ಪರಿಗಣಿಸಬೇಕು’ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು. ಇಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಗಟ್ಟಿಯಾಗಿ ನಿಂತು ಒಳ್ಳೆಯ ಆಡಳಿತ ಕೊಡಬೇಕಾದರೆ ಹೈಕಮಾಂಡ್‌ ರಾಜ್ಯ ಮುಖಂಡರ ವಿಮರ್ಶೆ ಮಾಡಬೇಕು. ಸಿಎಂ ಹುದ್ದೆಗೆ ಅವರೇ (ಸಿದ್ದರಾಮಯ್ಯ) ಯೋಗ್ಯರಿದ್ದರೆ ಮುಂದುವರಿಸಲಿ. ಇಲ್ಲದಿದ್ದರೆ ಬೇರೆಯವರನ್ನು ಆಯ್ಕೆ ಮಾಡಲಿ’ ಎಂದು ಸಲಹೆ ನೀಡಿದರು. ‘ಧರ್ಮ ಪೀಠಗಳು ರಾಜಕೀಯದ ಬಗ್ಗೆ ಮಾತನಾಡುವುದು ಸರಿಯಲ್ಲ. ಸಮಾಜದ ಸ್ವಾಸ್ಥ್ಯ ಕೆಡುವಾಗ ಧ್ವನಿ ಎತ್ತಿದರೆ ತಪ್ಪಲ್ಲ.  ಮುಖ್ಯಮಂತ್ರಿ ಎಲ್ಲ ಸಮುದಾಯದವರನ್ನು ಜತೆಯಲ್ಲಿ ಕರೆದೊಯ್ಯಬೇಕು. ಆದರೆ ಹಾಗೆ ಆಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ’ ಎಂದರು. ‘ಸಿಎಂ ಮತ್ತು ಡಿಸಿಎಂ ವಿವಾದದ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅವರಲ್ಲಿ ಕಚ್ಚಾಟ ಶುರುವಾಗಿ ರಾಜ್ಯದ ಅಭಿವೃದ್ಧಿ ಕುಂಠಿತ ಆಗುತ್ತದೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.