ಬೆಂಗಳೂರು: ಮಹಾತ್ಮ ಗಾಂಧಿಯವರ ಚಿಂತನೆಗಳ ಮೂಲಕ 21ನೇ ಶತಮಾನದ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲು ಸರ್ಕಾರ ನಿರ್ಧರಿಸಿದೆ.
ಈ ಕುರಿತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸೂಚನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ಮನುಕುಲದ ನಡುವೆ ಕ್ರೌರ್ಯದ ಪ್ರಕರಣಗಳು ಹೆಚ್ಚಾಗುತ್ತಿವೆ. ಸ್ಟೀಫನ್ ಹಾಕಿಂಗ್ ಸೇರಿದಂತೆ ಹಲವಾರು ವಿಜ್ಞಾನಿಗಳು ಈ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಇಂಗ್ಲಿಷ್, ಹಿಂದಿ ಭಾಷೆಗಳ ಅಬ್ಬರದಲ್ಲಿ ಸ್ಥಳೀಯ, ಪ್ರಾದೇಶಿಕ ಭಾಷೆಗಳು ಅಪಾಯದಲ್ಲಿವೆ. ಯಾವುದೇ ಸಮಾಜ ಅಥವಾ ಸಮುದಾಯ ತನ್ನ ಭಾಷೆ ಕಳೆದುಕೊಂಡರೆ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಂತಾಗುತ್ತದೆ ಎಂದು ವಿವರಿಸಿದ್ದಾರೆ.
ಇಂತಹ ಹಲವು ಸಮಸ್ಯೆಗಳಿಗೆ ಗಾಂಧೀಜಿ ಅವರ ಚಿಂತನೆಯಲ್ಲೇ ಪರಿಹಾರವಿದೆ. ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ, 6ನೇ ತರಗತಿ ಮೇಲ್ಪಟ್ಟ ಎಲ್ಲ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೂ ಪ್ರಬಂಧ ಸ್ಪರ್ಧೆ ನಡೆಸಬೇಕು. ಜನವರಿ ಕೊನೆಯ ವಾರದ ಒಳಗೆ ಸಿದ್ಧತೆ ಮಾಡಿಕೊಳ್ಳಬೇಕು. ಆ ಮೂಲಕ ಗಾಂಧಿ ಚಿಂತನೆಗಳನ್ನು ಅರ್ಥ ಮಾಡಿಸಬೇಕು. ವಿಜೇತರಾದವರಿಗೆ ಸೂಕ್ತ ಬಹುಮಾನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.