ADVERTISEMENT

ಥಣಿಸಂದ್ರ ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣ: ಸಿ.ಎಂ ನಿರಾಳ

ಡಿನೋಟಿಫೈ ಆರೋಪ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2018, 16:10 IST
Last Updated 27 ಆಗಸ್ಟ್ 2018, 16:10 IST
   

ಬೆಂಗಳೂರು: ಥಣಿಸಂದ್ರ ಅಕ್ರಮ ಡಿನೋಟಿಫಿಕೇಷನ್‌ ಆರೋಪದಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೈಬಿಡಲಾಗಿದೆ.

ಈ ಕುರಿತಂತೆ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಡಿ.ಪಾಟೀಲ ಸೋಮವಾರ ವಿಲೇವಾರಿ ಮಾಡಿದ್ದಾರೆ.

ಪ್ರಕರಣದ ಆರೋಪಿಗಳಾದ ನಿವೃತ್ತ ಐಎಎಸ್‌ ಅಧಿಕಾರಿ ಜ್ಯೋತಿ ರಾಮಲಿಂಗಂ, ಜಮೀನಿನ ಮಾಲೀಕರಾದ ಎ.ವಿ‌.ರವಿಪ್ರಕಾಶ್‌, ಎ.ವಿ. ಶ್ರೀರಾಮ್‌ ಅವರನ್ನೂ ಕೈಬಿಡಲಾಗಿದೆ.

ADVERTISEMENT

ಪ್ರಕರಣವೇನು?: 2007 ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣದ ಉದ್ದೇಶಕ್ಕೆ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಇದರಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ಥಣಿಸಂದ್ರ ಗ್ರಾಮದ ಸರ್ವೇ ನಂಬರ್‌ 87/4 ಬಿನಲ್ಲಿ 3 ಎಕರೆ 8 ಗುಂಟೆ ಜಮೀನನ್ನು 2007ರ ಸೆಪ್ಟೆಂಬರ್ 27ರಂದು ಡಿನೋಟಿಫೈ ಮಾಡಿ ಆದೇಶಿಸಲಾಗಿತ್ತು.

ಇದನ್ನು ಆಕ್ಷೇಪಿಸಿ ಚಾಮರಾಜನಗರದ ಮಹಾದೇವ ಸ್ವಾಮಿ ಎಂಬುವರು 2011ರಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 13 ಸಿ ಮತ್ತು ಡಿ ಹಾಗೂ ಭಾರತೀಯ ದಂಡ ಸಂಹಿತೆ ಕಲಂ 465 (ನಕಲಿ ದಾಖಲೆ ಸೃಷ್ಟಿ ಹಾಗೂ ತಪ್ಪು ದಾಖಲೆ ಸಲ್ಲಿಕೆ) ವಿವಿಧ ಕಲಂಗಳಡಿ ಕುಮಾರಸ್ವಾಮಿ, ಮಾಜಿ ಅರಣ್ಯ ಸಚಿವ ಸಿ.ಚೆನ್ನಿಗಪ್ಪ, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಜ್ಯೋತಿ ರಾಮಲಿಂಗಂ, ಜಮೀನಿನ ಮಾಲೀಕರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ನಂತರದಲ್ಲಿ ಈ ಪ್ರಕರಣವನ್ನು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು.

ಅರ್ಜಿದಾರ ಕುಮಾರಸ್ವಾಮಿ ಪರ ವಾದ ಮಂಡಿಸಿದ ಹಷ್ಮತ್‌ ಪಾಷಾ, ‘2007ರಲ್ಲಿ ಆಗಿರುವ ಡಿನೋಟಿಫಿಕೇಷನ್‌ ಆದೇಶವನ್ನು ಈತನಕ ಯಾರೂ ಪ್ರಶ್ನೆ ಮಾಡಿಲ್ಲ ಮತ್ತು ಡಿನೋಟಿಫೈ ಆದೇಶವು ಕಾನೂನುಬಾಹಿರವೂ ಅಲ್ಲ. ಹೀಗಾಗಿ ಅರ್ಜಿದಾರರನ್ನು ಆರೋಪದಿಂದ ಕೈಬಿಡಬೇಕು’ ಎಂದು ಕೋರಿದರು.

ಆರೋಪದಿಂದ ಕೈಬಿಡಲು ಕೋರ್ಟ್ ನೀಡಿರುವ ಕಾರಣಗಳು.

* ದೂರು ದಾಖಲಿಸುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ.

* ಡಿನೋಟಿಫೈ ಮಾಡಿದ ನಾಲ್ಕು ವರ್ಷಗಳ ನಂತರ ದೂರು ದಾಖಲಿಸಲಾಗಿದೆ.

* ಉದ್ದೇಶಪೂರ್ವಕವಾಗಿ ಡಿನೋಟಿಫೈ ಮಾಡಿದ್ದಾರೆ ಎಂಬ ಆರೋಪ ಸಾಬೀತುಪಡಿಸುವ ಅಥವಾ ಅಕ್ರಮ ನಡೆದಿದೆ ಎಂಬುದಕ್ಕೆ ಇಲ್ಲವೇ ಲಂಚ ಪಡೆದಿದ್ದಾರೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರ ಇಲ್ಲ.

* ಡಿನೋಟಿಫೈ ಮಾಡಿದ ಜಮೀನನ್ನು ಜಮೀನು ಮಾಲೀಕರಿಗೇ ಬಿಟ್ಟುಕೊಡಲಾಗಿದೆ. ಬೇರೆಯವರಿಗೆ ಕೊಟ್ಟಿಲ್ಲ.

*ಕುಮಾರಸ್ವಾಮಿ ಅವರ ತೇಜೋವಧೆ ಮಾಡುವ ಉದ್ದೇಶದಿಂದ ಮತ್ತು ರಾಜಕೀಯ ದುರುದ್ದೇಶದಿಂದ ಈ ಕೇಸು ಹಾಕಲಾಗಿತ್ತು. ಕಡೆಗೂ ಸತ್ಯಕ್ಕೆ ಜಯ ದೊರೆತಿದೆ.
–ಹಷ್ಮತ್‌ ಪಾಷಾ, ಕುಮಾರಸ್ವಾಮಿ ಪರ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.