ADVERTISEMENT

ತಿರುಚಿದ ವಿಡಿಯೊ: ಸಿದ್ದರಾಮಯ್ಯ ಕಿಡಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 16:13 IST
Last Updated 17 ಡಿಸೆಂಬರ್ 2023, 16:13 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ವಿಧಾನಸಭೆಯಲ್ಲಿ ನಾನು ಮಾತನಾಡಿದ್ದ ವಿಡಿಯೊವನ್ನು ತಪ್ಪು ಅರ್ಥ ಬರುವಂತೆ ಕತ್ತರಿಸಿ ಬಿಜೆಪಿ ನಾಯಕರು ವಿಕೃತ ಸಂತೋಷ ಪಡುತ್ತಿದ್ದಾರೆ. ಬಿಜೆಪಿ ನಾಯಕರ ಇಂತಹ ನಡವಳಿಕೆ, ಬಿಜೆಪಿ ಎಂದರೆ ‘ಬೊಗಳೆ ಜನತಾ ಪಾರ್ಟಿ’ ಎಂಬ ಕುಖ್ಯಾತಿಯನ್ನು ದೃಢೀಕರಿಸುವಂತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತಮ್ಮ ಮಾತಿನ ವಿಡಿಯೊ ತುಣುಕು ಸಹಿತ ‘ಎಕ್ಸ್‌’ (ಟ್ವೀಟ್‌) ಮಾಡಿರುವ ಸಿದ್ದರಾಮಯ್ಯ, ‘ತಿರುಚಿದ ವಿಡಿಯೊಗಳನ್ನು ನಂಬುವಷ್ಟು ಜನ ಮೂರ್ಖರಲ್ಲ. ನಿಮ್ಮ ಮಾನ ಮರ್ಯಾದೆ ಬಗ್ಗೆ ನಿಮಗೆ ಕನಿಷ್ಠ ಕಾಳಜಿ ಇದ್ದರೆ ಹಂಚಿಕೊಂಡಿರುವ ವಿಡಿಯೊವನ್ನು ತೆಗದುಹಾಕಿ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದ್ದಾರೆ.

‘ಫೇಕ್ ಸುದ್ದಿಗಳ ಸೃಷ್ಟಿ ಮತ್ತು ಪ್ರಸಾರವನ್ನೇ ನಂಬಿ ರಾಜಕಾರಣ ಮಾಡುವ ಬಿಜೆಪಿಯವರಿಗೆ ನನ್ನ ವಚನ ಬದ್ಧತೆಯನ್ನು ಪ್ರಶ್ನಿಸುವ ನೈತಿಕತೆಯೇ ಇಲ್ಲ. ನರೇಂದ್ರ ಮೋದಿ ಅವರು ಮೌಲ್ಯಾಧಾರಿತ ರಾಜಕಾರಣ ಮತ್ತು ಸತ್ಯದ ಪರವಾಗಿದ್ದರೆ ಫೇಕ್ ನ್ಯೂಸ್ ಪೆಡ್ಲರ್‌ಗಳಾದ ಸಿ.ಟಿ ರವಿ ಮತ್ತು ಅಶ್ವತ್ಥನಾರಾಯಣ ಅವರನ್ನು ತಕ್ಷಣ ಪಕ್ಷದಿಂದ ಆಚೆಗಟ್ಟಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಏನು ಹೇಳಿದ್ದರು ಎನ್ನುವುದನ್ನು ನಾನು ಸದನದಲ್ಲಿ ವಿವರಿಸಿದ್ದೆ. ಅದನ್ನು ಕತ್ತರಿಸಿ, ಯಡಿಯೂರಪ್ಪ ಅವರು ಆಡಿದ ಮಾತನ್ನೇ ಸಿದ್ದರಾಮಯ್ಯ ಅವರ ಮಾತು ಎನ್ನುವಂತೆ ಬಿಜೆಪಿ- ಜೆಡಿಎಸ್‌ನವರು ಪ್ರಚಾರ ಮಾಡುತ್ತಿದ್ದಾರೆ’ ಎಂದಿದ್ದಾರೆ. 

‘ಸಿ.ಟಿ. ರವಿ ಅವರೇ, ನೀವು ಮತ್ತು ನಿಮ್ಮ ಪಕ್ಷ ಇಂಥ ಅಗ್ಗದ ಚೇಷ್ಟೆಗಳನ್ನು ಮಾಡಿದ್ದರ ಫಲವೇ ಜನ ನಿಮ್ಮನ್ನು ಮನೆಯಲ್ಲಿ‌ ಮತ್ತು ಪಕ್ಷವನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕುಳ್ಳಿರಿಸಿದ್ದಾರೆ. ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಪರದಾಡಬೇಕಾದ ದುಃಸ್ಥಿತಿಯಲ್ಲಿ ನಿಮ್ಮ ಪಕ್ಷ ಇದೆ. ಆದರೂ ನಿಮಗೆ ಬುದ್ದಿ ಬಂದಂತೆ ಕಾಣುತ್ತಿಲ್ಲ. ಅಶ್ವತ್ಥನಾರಾಯಣ ಕೂಡ ಇದೇ ರೀತಿ ವಿಡಿಯೊ ಹಂಚಿಕೊಂಡಿದ್ದು ನೋಡಿ ಆಶ್ಚರ್ಯವಾಗುತ್ತಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.