ADVERTISEMENT

ಜನತಾ ದರ್ಶನ; ಶಾಲೆಯಲ್ಲಿ ಕುಮಾರಸ್ವಾಮಿ ವಾಸ್ತವ್ಯ

ಚಂಡರಕಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಜನತಾ ದರ್ಶನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 3:09 IST
Last Updated 22 ಜೂನ್ 2019, 3:09 IST
ಜನತಾ ದರ್ಶನ
ಜನತಾ ದರ್ಶನ   

ಚಂಡರಕಿ (ಯಾದಗಿರಿ ಜಿಲ್ಲೆ): ತಮ್ಮ ಮಹತ್ವಾಕಾಂಕ್ಷೆಯ ಗ್ರಾಮ ವಾಸ್ತವ್ಯವನ್ನು ಇಲ್ಲಿಂದ ಶುರು ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಇಡೀ ದಿನ ಸಾರ್ವಜನಿಕರ ದೂರು–ದುಮ್ಮಾನಗಳಿಗೆ ಕಿವಿಯಾದರು.

ಆಡಂಬರ ಬದಿಗೊತ್ತಿ ಸಾರಿಗೆ ಸಂಸ್ಥೆಯ ಕೆಂಪು ಬಸ್‌ನಲ್ಲಿ ಯಾದಗಿರಿಯಿಂದ ಗ್ರಾಮಕ್ಕೆ ಬಂದರು. ಅವರು, ಜನತಾ ದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಚುಟುಕಾದ ಭಾಷಣ ಮಾಡಿದರು. ಉರಿಬಿಸಿಲಿನಿಂದ ಹೆಚ್ಚಿದ್ದ ಉಷ್ಣಾಂಶ, ಸಂಜೆ ಸುರಿದ ಮಳೆಯಲ್ಲಿಯೇ ಜನತಾ ದರ್ಶನ ನಡೆಸಿದರು. ರಾತ್ರಿಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳೊಂದಿಗೆ ಸಹಭೋಜನ ಸವಿದು, ಶಾಲಾ ಕೊಠಡಿಯಲ್ಲಿ ಮಲಗಿದರು.

ಅಹವಾಲು ಸಲ್ಲಿಸುವವರಿಗಾಗಿ ಜಿಲ್ಲಾ ಆಡಳಿತಇಲಾಖಾವಾರು ಕೌಂಟರ್‌ಗಳನ್ನು ತೆರೆದಿತ್ತು. ಅಲ್ಲಿಅರ್ಜಿ ಪಡೆದು ಟೋಕನ್‌ ನೀಡುವ ವ್ಯವಸ್ಥೆ ಮಾಡಿತ್ತು.ಹೆಚ್ಚು ಜನರು ಬಂದಿದ್ದರಿಂದ ನೂಕುನುಗ್ಗಲು ಉಂಟಾಯಿತು.ಬಿಜೆಪಿ ಕಾರ್ಯಕರ್ತರು, ರೈತ ಸಂಘಟನೆಯವರು ಹಾಗೂ ಅಂಗವಿಕಲರು ತಮ್ಮ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆಯನ್ನೂ ನಡೆಸಿದರು. ಅವರ ಬಳಿಗೇ ತೆರಳಿದ ಮುಖ್ಯಮಂತ್ರಿ ಮನವಿ ಸ್ವೀಕರಿಸಿದರು.

ADVERTISEMENT

ಬಿಜೆಪಿಯ ಕೆಲವರು ‘ಮೋದಿ.. ಮೋದಿ’ ಎಂದು ಘೋಷಣೆ ಕೂಗಿದರು. ಬಿಜೆಪಿ ಕಾರ್ಯಕರ್ತರೊಬ್ಬರು ‘ಕಲಬುರ್ಗಿ–ಯಾದಗಿರಿ ಡಿಸಿಸಿ ಬ್ಯಾಂಕ್‌ ಹಾಳಾಗಿದೆ’ ಎಂದು ದೂರಿದಾಗ ತಾಳ್ಮೆ ಕಳೆದುಕೊಂಡ ಸಿಎಂ ಅವರ ಮೇಲೆ ರೇಗಾಡಿದರು.

ಊಟವನ್ನೂ ಮಾಡಲಿಲ್ಲ: ಜನತಾ ದರ್ಶನದ ಉದ್ಘಾಟನಾ ಸಮಾರಂಭ, ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವ ಕಾರ್ಯಕ್ರಮ ಮುಗಿಯಬೇಕಾದರೆ ಮಧ್ಯಾಹ್ನ 2.30 ಆಯಿತು. ಜನ ಕಾಯುವುದು ಬೇಡ ಎಂಬ ಕಾರಣಕ್ಕಾಗಿ ಕುಮಾರಸ್ವಾಮಿ ಊಟಕ್ಕೂ ತೆರಳದೆ ಜನತಾ ದರ್ಶನ ಆರಂಭಿಸಿದರು. ಜನರಿಗೆ ಅನ್ನ– ಸಾಂಬಾರು ವ್ಯವಸ್ಥೆ ಮಾಡಲಾಗಿತ್ತು. ‘ಎಲ್ಲರ ಅಹವಾಲು ಸ್ವೀಕರಿಸಿಯೇ ಹೋಗುತ್ತೇನೆ. ಊಟ ಮಾಡಿಕೊಂಡು ಬನ್ನಿ’ ಎಂದು ಹೇಳಿದರೂ ಕೇಳದೇ ಬಹುತೇಕರು ತಾವೂ ಉಪವಾಸ ನಿಂತು ಅಹವಾಲು ಸಲ್ಲಿಸಿದರು.

ಎಂಟು ಗಂಟೆ ನಡೆದ ಜನತಾ ದರ್ಶನದಲ್ಲಿ 4 ಸಾವಿರಕ್ಕೂ ಹೆಚ್ಚು ಅರ್ಜಿಸ್ವೀಕೃತವಾದವು.ಪಹಣಿ ತಿದ್ದುಪಡಿ, ವೈದ್ಯಕೀಯ ಚಿಕಿತ್ಸಾ ವೆಚ್ಚ, ವಿದ್ಯುತ್ ಪರಿವರ್ತಕಗಳ ಬದಲಾವಣೆ, ಸಾಲಮನ್ನಾ, ಸಾಮಾಜಿಕ ಭದ್ರತೆ ಯೋಜನೆಗಳಿಗೆ ಸಂಬಂಧಿಸಿದಂತೆ ಬಂದ 2 ಸಾವಿರಕ್ಕೂ ಹೆಚ್ಚು ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಯಿತು.

ಅಪಘಾತದಲ್ಲಿ ಗಾಯಗೊಂಡ ಮುನಗಲ್ ಗ್ರಾಮದ ಎಂಜಿನಿಯರಿಂಗ್ ಪದವೀಧರ ಭೀಮರೆಡ್ಡಿ ಶಂಕರಪ್ಪ ಅವರಿಗೆ ತಕ್ಷಣ ₹ 5 ಲಕ್ಷ ಪರಿಹಾರ ನೀಡಲು ಸಿ.ಎಂ ಸೂಚಿಸಿದರು.

ವೋಲ್ವೊ ಕಾರು ಮತ್ತು ಪಾದಯಾತ್ರೆ
ಚಂಡರಕಿ ಗ್ರಾಮಕ್ಕೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೆಂಪು ಬಸ್‌ನಲ್ಲಿ ಬಂದರು. ಊರನ್ನು ತಲುಪುತ್ತಿದ್ದಂತೆಯೇ ತೆಲಂಗಾಣ ರಾಜ್ಯದ ನೋಂದಣಿ ಹೊಂದಿರುವ ವೋಲ್ವೊ ಎಸ್‌ಯುವಿ ಕಾರನ್ನೇರಿದರು. ಹೂಗಳಿಂದ ಅಲಂಕೃತ ಕಾರಿನಲ್ಲಿ ಕೆಲವು ಮೀಟರ್‌ ದೂರ ಬಂದ ಕುಮಾರಸ್ವಾಮಿ, ಅವರು ನಂತರ ಪಾದಯಾತ್ರೆ ಮೂಲಕ ವೇದಿಕೆಗೆ ಬಂದರು.

ಸಿ.ಎಂ.ಗಾಗಿ 21 ಕಿ.ಮೀ. ಅಗೆದು ಸಮತಟ್ಟು
ಕಲಬುರ್ಗಿ
: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯಕ್ಕಾಗಿ ಹೇರೂರ (ಬಿ) ಗ್ರಾಮಕ್ಕೆ ತೆರಳುವ 21 ಕಿ.ಮೀ. ರಸ್ತೆಯನ್ನು ಅಗೆದಿದ್ದು, ಮಣ್ಣು–ಜಲ್ಲಿ ಹಾಕಿ ಸಮತಟ್ಟು ಮಾಡುವ ಕಾರ್ಯವನ್ನು ಹಗಲು–ರಾತ್ರಿ ಮಾಡಲಾಗುತ್ತಿದೆ.

ಕಲಬುರ್ಗಿ ತಾಲ್ಲೂಕಿನ ಹೇರೂರ (ಬಿ) ಗ್ರಾಮಕ್ಕೆ ತೆರಳುವ ರಸ್ತೆ

ಫರಹತಾಬಾದ್‌ದಿಂದ ಹೇರೂರ (ಬಿ) ಗ್ರಾಮದವರೆಗೆ ಟಾರ್‌ ರಸ್ತೆ ಇತ್ತು. ಅದು ಸಂಪೂರ್ಣ ಹದಗೆಟ್ಟಿತ್ತು. ಜೂನ್‌ 22ರಂದು ಗ್ರಾಮವಾಸ್ತವ್ಯಕ್ಕೆ ಇಲ್ಲಿಗೆ ತೆರಳುವ ಮುಖ್ಯಮಂತ್ರಿಯನ್ನು ಸುತ್ತಿಬಳಸಿ ಕರೆದುಕೊಂಡು ಹೋಗುವ ಪ್ರಯತ್ನವೂ ನಡೆದಿತ್ತು. ಕೊನೆ ಕ್ಷಣದಲ್ಲಿ ಅದನ್ನು ಕೈಬಿಟ್ಟ ಜಿಲ್ಲಾ ಆಡಳಿತ,ಈ ರಸ್ತೆಯನ್ನೇ ರಿಪೇರಿ ಮಾಡುತ್ತಿದೆ.

ಫರಹತಾಬಾದ್‌ನಿಂದ ಕವಲಗಾ ವರೆಗಿನ 6 ಕಿ.ಮೀ. ರಸ್ತೆಯಲ್ಲಿಯ ಗುಂಡಿಗಳನ್ನು ಮುಚ್ಚಲಾಗಿದೆ. ಅಲ್ಲಿಂದ ಹೇರೂರ ವರೆಗಿನ 21 ಕಿ.ಮೀ. ರಸ್ತೆಯನ್ನು ಅಗೆದಿದ್ದು, ಮಣ್ಣು–ಜಲ್ಲಿ ಹಾಕಿ ಸಮತಟ್ಟು ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.