ಬೆಂಗಳೂರು: ಜಿಂದಾಲ್ ಸಂಸ್ಥೆಗೆ ಭೂಮಿ ಮಂಜೂರು ಮಾಡುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಬಿಜೆಪಿಯು ಭಾನುವಾರ (ಜೂನ್ 16) ಬೆಳಗ್ಗೆ ಮುಖ್ಯಮಂತ್ರಿ ಗೃಹ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಿರುವ ಬೆನ್ನಿಗೇ ಟ್ವೀಟ್ ಮಾಡಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ, ‘ಮುತ್ತಿಗೆ ಹಾಕುವ ಅಗತ್ಯವಿಲ್ಲ. ನಿಮ್ಮ ಸಮಯ ತಿಳಿಸಿ. ಜಿಂದಾಲ್, ಬರ, ಸಾಲಮನ್ನಾ ಕುರಿತಾಗಿ ನಿಮ್ಮ ಜತೆ ಚರ್ಚೆಗೆ ನಾನು ಸಿದ್ಧ,’ ಎಂದಿದ್ದಾರೆ.
ಶನಿವಾರ ರಾತ್ರಿ ಟ್ವೀಟ್ ಮಾಡಿರುವ ಅವರು, ‘ಬಿಜೆಪಿ ನಾಯಕರ 'ಅಹೋರಾತ್ರಿ' ಪ್ರತಿಭಟನೆಯನ್ನು ಗಮನಿಸಿದ್ದೇನೆ. ಸಿಎಂ ಕಚೇರಿಗೆ ಮುತ್ತಿಗೆಯ ಅವಶ್ಯಕತೆಯಿಲ್ಲ. ಜಿಂದಾಲ್, ಬರ, ರೈತರ ಸಾಲಮನ್ನಾ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ. ಪ್ರಧಾನಿ ಸೇರಿದಂತೆ ಕೇಂದ್ರದ ಸಚಿವರೊಂದಿಗೆ ಹಲವು ಸಮಸ್ಯೆ ಕುರಿತು ಚರ್ಚಿಸಿದ್ದೇನೆ. ನಿಮ್ಮ ಸಮಯ ತಿಳಿಸಿ... ಚರ್ಚೆಗೆ ನಾನು ಸಿದ್ಧ,’ ಎಂದು ಅವರು ಬಿಜೆಪಿ ನಾಯಕರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ.
ಇದನ್ನೂ ಓದಿ:ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಬಿಜೆಪಿ ಅಣಿ
ಜಿಂದಾಲ್ ಕಂಪನಿಗೆ ಜಮೀನು ಮಂಜೂರಾತಿ ಮತ್ತು ಬರ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ವಿರೋಧಿಸಿ ಎರಡು ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿರುವ ಬಿಜೆಪಿ ನಾಯಕರು, ಭಾನುವಾರ ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಅವರ ಗೃಹ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.