ಸೊರಬ: ‘ಸಮ್ಮಿಶ್ರ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ ಆಗಿರುವುದು ಜನರಿಗಾಗಿಯೇ ಹೊರತು ಹಣ ಸಂಪಾದನೆಗಾಗಿ ಅಲ್ಲ. ಅಧಿಕಾರಿಗಳ ವರ್ಗಾವಣೆಯಲ್ಲಿ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂದು ಬಿಜೆಪಿಯವರು ಹಗುರವಾಗಿ ಮಾತನಾಡುತ್ತಿದ್ದಾರೆ. ವರ್ಗಾವಣೆಗಾಗಿ ಯಾವುದೇ ಅಧಿಕಾರಿಯಿಂದ ಹಣ ಪಡೆದ ಬಗ್ಗೆ ಸಾಕ್ಷ್ಯ ಸಾಬೀತುಪಡಿಸಿದರೆ ನಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ಈ ಬಗ್ಗೆ ಯಡಿಯೂರಪ್ಪ ಬಹಿರಂಗ ಚರ್ಚೆಗೆ ಬರುವುದಾದರೆ ನಾನು ಸಿದ್ಧ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.
ಸೋಮವಾರ ಪಟ್ಟಣದ ಬಂಗಾರಧಾಮದಲ್ಲಿ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ತೀರ್ಥಹಳ್ಳಿ ವರದಿ: 'ಸಮ್ಮಿಶ್ರ ಸರ್ಕಾರಕ್ಕೆ ಯಡಿಯೂರಪ್ಪ ದೀಪಾವಳಿಯ ಗಡುವು ನೀಡಿದ್ದಾರೆ. ನಂತರ ಕ್ರಿಸ್‌ಮಸ್ ಹಬ್ಬದ ಗಡುವು ನೀಡಬಹುದು. ನನ್ನನ್ನು ಮನೆಗೆ ಕಳುಹಿಸುವ ಶಕ್ತಿ ಇರುವುದು ಜನರಿಗೆ. ಭಗವಂತ ಕೊಟ್ಟ ಅಧಿಕಾರವನ್ನು ಯಡಿಯೂರಪ್ಪ ಕಿತ್ತುಕೊಳ್ಳಲು ಸಾಧ್ಯವಿಲ್ಲ' ಎಂದು ಕುಮಾರಸ್ವಾಮಿ ಹೇಳಿದರು.
ಸಾಗರ ವರದಿ:‘ಕಾಂಗ್ರೆಸ್‌ನ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವ ಮೂಲಕ ಸಚಿವರನ್ನಾಗಿ ಮಾಡಲು ನಾನು ಸಿದ್ಧ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಮುಖ್ಯಮಂತ್ರಿ ವಿರುದ್ಧ ಬಿಜೆಪಿ ದೂರು
ಶಿವಮೊಗ್ಗ: ಉಪಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತದಾರರಿಗೆ ಆಮಿಷವೊಡ್ಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ಮುಖಂಡರು ಸೋಮವಾರಜಿಲ್ಲಾಧಿಕಾರಿಗೆದೂರುನೀಡಿದರು.
ಶಿರಾಳಕೊಪ್ಪದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕುಮಾರಸ್ವಾಮಿಅವರು, ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಿದರೆ ನೀರಾವರಿ ಯೋಜನೆ ಜಾರಿಗೊಳಿಸಲಾಗುವುದು, ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡಲಾಗುವುದು ಎಂದು ಭರವಸೆ ನೀಡುವ ಮೂಲಕ ಮತದಾರರಿಗೆ ಆಮಿಷವೊಡ್ಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.