ADVERTISEMENT

ಅಕ್ರಮ ಸರಕು ಸಾಗಣೆ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸೂಚನೆ

‘ನಕಲಿ ಇ-ವೇ ಬಿಲ್ ಪತ್ತೆ ಹಚ್ಚಿ ದಂಡ ವಿಧಿಸಿ’

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 7:16 IST
Last Updated 6 ಜೂನ್ 2020, 7:16 IST
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ   

ಬೆಂಗಳೂರು: ಇ-ವೇ ಬಿಲ್ ದುರ್ಬಳಕೆ ಮತ್ತಿತರ ಅಕ್ರಮ ಪತ್ತೆ ಹಚ್ಚಿ ದಂಡ ವಿಧಿಸುವ ಜೊತೆಗೆ, ಈ ರೀತಿ ಸರಕು ಸಾಗಿಸುವ ಸಾರಿಗೆ ಕಂಪನಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು.

ಗೃಹ ಕಚೇರಿ ಕೃಷ್ಣದಲ್ಲಿ ಶನಿವಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ, ರಾಜ್ಯದ ತೆರಿಗೆ ಸಂಗ್ರಹ ಸ್ಥಿತಿಗತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ನಕಲಿ ಇ-ವೇ ಬಿಲ್ ಗಳ ಬಳಕೆ, ಸರಕು ಸಾಗಿಸಲು ಸಮಯಾವಕಾಶದ ದುರ್ಬಳಕೆ ಮತ್ತಿತರ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಳೆದ ತಿಂಗಳು ನಡೆರದ ಇಲಾಖೆಯ ಸಭೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದರು.

ಅದರಂತೆ, ರಸ್ತೆ ಜಾಗೃತಿ ತಂಡಗಳನ್ನು 77ರಿಂದ 116ಕ್ಕೆ ಹೆಚ್ಚಿಸಲಾಗಿದೆ. ಈ ತಂಡಗಳು 2.89 ಲಕ್ಷ ಸರಕು ವಾಹನಗಳು ಹಾಗೂ 7.46 ಲಕ್ಷ ಇ-ವೇ ಬಿಲ್ ಗಳನ್ನು ಪರಿಶೀಲಿಸಿದೆ. ಇದರಲ್ಲಿ ಸುಮಾರು 300 ಅಕ್ರಮಗಳು ಪತ್ತೆಯಾಗಿವೆ. ₹ 6.21 ಕೋಟಿ ತೆರಿಗೆ ಮತ್ತು ದಂಡ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಅಲ್ಲದೆ, ₹ 40 ಲಕ್ಷಗೂ ಹೆಚ್ಚಿನ ವ್ಯವಹಾರ ಇರುವ ವಿತರಕರ ಬಗ್ಗೆ ಸಮೀಕ್ಷೆ ನಡೆಸುವಂತೆ ಹಾಗೂ ಮಾಸಿಕ ₹ 20 ಲಕ್ಷಗಳಿಗೆ ಹೆಚ್ಚು ಬಾಡಿಗೆ ಸಂಗ್ರಹಿಸುವ ದೊಡ್ಡ ನಗರಗಳ ವಾಣಿಜ್ಯ ಸಂಕೀರ್ಣಗಳ ಸಮೀಕ್ಷೆ ನಡೆಸುವಂತೆಯೂ ನಿರ್ದೇಶನ ನಿರ್ದೇಶನ ನೀಡಿದರು.

ಕೇಂದ್ರ ಸರ್ಕಾರದಿಂದ 2019-20ನೇ ಸಾಲಿನ ಡಿಸೆಂಬರ್‌ನಿಂದ ಫೆಬ್ರುವರಿ ತಿಂಗಳವರೆಗಿನ ಜಿಎಸ್‌ಟಿ (ಸರಕು ಸೇವಾ ತೆರಿಗೆ) ಪರಿಹಾರ ಮೊತ್ತ ₹ 4314.13 ಕೋಟಿ ಬಿಡುಗಡೆಯಾಗಿದೆ. ಅಲ್ಲದೆ, ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಸಂಗ್ರಹದಲ್ಲಿ ಏರಿಕೆ ಕಂಡುಬರುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ.ಎಸ್. ಶ್ರೀಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.