ಬೆಂಗಳೂರು: ‘ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಪದೇ ಪದೇ ಟೀಕೆ ಮಾಡುತ್ತಿದ್ದಾರೆ. ಇಲಾಖೆಗಳ ಪ್ರಗತಿ ಕನಿಷ್ಠ ಎಂದು ಟೀಕೆ ಮಾಡಿದ್ದಾರೆ. ಅವರು ಬೆಳಗಾವಿಯ ಅಧಿವೇಶನಕ್ಕೆ ಬರಲಿ. ಅವರ ಮುಖಕ್ಕೆ ದಾಖಲೆಗಳನ್ನು ಹಿಡಿಯುತ್ತೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಂಥಾಹ್ವಾನ ನೀಡಿದರು.
ವಿಧಾನಸೌಧದಲ್ಲಿ ಮಂಗಳವಾರ ನಡೆದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಅವರು ಮುಖ್ಯಮಂತ್ರಿಯಾಗಿದ್ದಾಗ ಇಲಾಖೆಗಳ ಪ್ರಗತಿ ಎಷ್ಟಾಗಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಲಿ. 2008 ರಲ್ಲಿ ₹ 60,400 ಕೋಟಿಯ ಬಜೆಟ್ ಮಂಡಿಸಿದ್ದರು. ಆರು ತಿಂಗಳಲ್ಲಿ ಖರ್ಚಾಗಿದ್ದು ₹ 25,502 ಕೋಟಿ ಮಾತ್ರ. ಸಾಧನೆ ಶೇ 39ರಷ್ಟು. ಕಳೆದ ಸರ್ಕಾರದ ಅವಧಿಯಲ್ಲಿ ಮೊದಲ ಆರು ತಿಂಗಳ ಸಾಧನೆ ಶೇ 43ರಷ್ಟು. ಸಮ್ಮಿಶ್ರ ಸರ್ಕಾರ ₹2.18 ಲಕ್ಷ ಕೋಟಿಯ ಬಜೆಟ್ ಮಂಡಿಸಿದೆ. ಆರು ತಿಂಗಳಲ್ಲಿ ₹94,704 ಕೋಟಿ ವೆಚ್ಚ ಮಾಡಿದೆ. ಅಂದರೆ, ಶೇ 43ರಷ್ಟು ಸಾಧನೆ ಆಗಿದೆ. ಸರ್ಕಾರದ ಸಾಧನೆ ಬಗ್ಗೆ ಯಡಿಯೂರಪ್ಪ ಗಾಬರಿಪಡುವುದು ಬೇಡ’ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ವಿರುದ್ಧ ವಾಗ್ದಾಳಿ: ‘ರಾಜ್ಯದಲ್ಲಿ ರೈತರ ಸಾಲ ಮನ್ನಾ ಆಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕೆ ಮಾಡಿದ್ದಾರೆ. ಬ್ಯಾಂಕ್‌ಗಳು ರೈತರಿಗೆ ನೋಟಿಸ್ ನೀಡುತ್ತಿವೆ ಎಂದೂ ಹೇಳಿದ್ದಾರೆ. ನೋಟಿಸ್ ನೀಡಿರುವ ಬ್ಯಾಂಕ್‌ಗಳು ಕೇಂದ್ರ ಸರ್ಕಾರದ ಅಧೀನದಲ್ಲಿವೆ. ಅದಕ್ಕೆ ಕೇಂದ್ರ ಸರ್ಕಾರವೇ ಕಾರಣ’ ಎಂದು ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.