ADVERTISEMENT

ರಾಜ್ಯದಲ್ಲಿ 24/7 ಗಣಿಗಾರಿಕೆ: ಸುಳ್ಳು ಹೇಳಿದ ಸಿಎಂ

ಸಿ.ಎಂ ಸೂಚನೆ ಮೇರೆಗೆ ವಾಣಿಜ್ಯ, ಕೈಗಾರಿಕೆ ಇಲಾಖೆಗೆ ಪತ್ರ ಬರೆದಿರುವ ಸಿ.ಎಸ್‌

ಆರ್. ಹರಿಶಂಕರ್
Published 11 ನವೆಂಬರ್ 2024, 0:11 IST
Last Updated 11 ನವೆಂಬರ್ 2024, 0:11 IST

24 ಗಂಟೆ ಅದಿರು ಸಾಗಿಸುವ ಕುರಿತು ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ಸರ್ಕಾರದ ವಿವಿಧ ಇಲಾಖೆಗಳಿಗೆ ಪತ್ರ ಬರೆದಿದ್ದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌

24 ಗಂಟೆ ಅದಿರು ಸಾಗಿಸುವ ಕುರಿತು ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ಸರ್ಕಾರದ ವಿವಿಧ ಇಲಾಖೆಗಳಿಗೆ ಪತ್ರ ಬರೆದಿದ್ದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌

ಬಳ್ಳಾರಿ: ‘ರಾಜ್ಯದಲ್ಲಿ ದಿನದ 24 ಗಂಟೆಯೂ ಅದಿರು ಗಣಿಗಾರಿಕೆಗೆ ಅವಕಾಶ ನೀಡುವ ಯಾವುದೇ ಪ್ರಸ್ತಾವಗಳು ಸರ್ಕಾರದ ಮುಂದಿಲ್ಲ. ಅದರ ಬಗ್ಗೆ ನನಗೆ ಗೊತ್ತೂ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ತೋರಣಗಲ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.

ADVERTISEMENT

ಆದರೆ, ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಅಕ್ಟೋಬರ್‌ 30ರಂದು ವಾಣಿಜ್ಯ ಮತ್ತು ಕೈಗಾರಿಕೆ (ಗಣಿ) ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ, ಶಾಲಿನಿ ರಜನೀಶ್‌,  ‘ಜೀವವೈವಿಧ್ಯ ಮತ್ತು ವನ್ಯಜೀವಿ ಅಭಯಾರಣ್ಯಗಳನ್ನು ಹೊರತುಪಡಿಸಿ ಉಳಿದೆಡೆ ದಿನದ 24 ಗಂಟೆಗಳೂ ಗಣಿಗಾರಿಕೆ ನಡೆಸಲು ಅನುಮತಿ ನೀಡಬೇಕು. ಈ  ವಿಷಯವನ್ನು ನ. 14ರಂದು ನಡೆಯಲಿರುವ ಸಚಿವ ಸಂಪುಟದ ಮುಂದೆ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದ್ದಾರೆ. ಈ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಅರಣ್ಯ ಇಲಾಖೆ ವಿರೋಧ: ‌ಇದಕ್ಕೂ ಹಿಂದೆ ಅಕ್ಟೋಬರ್‌ 5ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ವಿವಿಧ ಇಲಾಖೆಗಳ ಸಭೆಯಲ್ಲಿ 24 ಗಂಟೆ ಗಣಿಗಾರಿಕೆ ನಡೆಸುವ, ಅದಿರು ಸಾಗಿಸುವ ಕುರಿತು ‘ಭಾರತೀಯ ಖನಿಜ ಕೈಗಾರಿಕೆಗಳ ಒಕ್ಕೂಟ (ಫಿಮಿ)’ ಪ್ರಸ್ತಾಪ ಬಂದಿತ್ತು. ದೇಶದ ಇತರ ಭಾಗಗಳಲ್ಲಿ 24 ಗಂಟೆ ಅದಿರು ಸಾಗಣೆಗೆ ಅವಕಾಶವಿದೆ. ಇಲ್ಲಿಯೂ ಅದು ಜಾರಿಗೆ ಬರಬೇಕು ’ ಎಂದು ಫಿಮಿ ಹೇಳಿತ್ತು. ಈ ದಾಖಲೆಗಳೂ ‘ಪ್ರಜಾವಾಣಿ’ಗೆ ಸಿಕ್ಕಿವೆ.

ಸಭೆಯಲ್ಲಿ ವಿಷಯದ ಕುರಿತು ವಿಸ್ತೃತ ಚರ್ಚೆಗಳಾಗಿದ್ದವು. ಈ ವಿಷಯಕ್ಕೆ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು. ದಿನದ 24 ಗಂಟೆ ಗಣಿಗಾರಿಕೆ, ಅದಿರು ಸಾಗಣೆ ಮಾಡುವುದರಿಂದ ವನ್ಯಜೀವಿಗಳಿಗೆ ತೊಂದರೆ ಆಗುತ್ತದೆ ಎಂದು ಬಳ್ಳಾರಿಯ ಅರಣ್ಯ ಉಪ ಸಂರಕ್ಷಣಾಧಿಕಾರಿ ವರದಿ ನೀಡಿರುವುದಾಗಿಯೂ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಭೆಗೆ ತಿಳಿಸಿದ್ದರು. ಅಲ್ಲದೇ, ಜಿಲ್ಲಾ ಕಾರ್ಯಪಡೆಯ ವರದಿಯನ್ನೂ ಸಭೆಗೆ ಸಲ್ಲಿಸಿದ್ದರು. ಜತೆಗೆ ಸುಪ್ರೀಂ ಕೋರ್ಟ್‌ ನೇಮಿಸಿರುವ ಮೇಲುಸ್ತುವಾರಿ ಸಮಿತಿಯ ಅಭಿಪ್ರಾಯ ವನ್ನೂ ಕೇಳಬೇಕು ಎಂದು ಸಲಹೆ ನೀಡಿದ್ದರು.

ದಿನದ 24 ಗಂಟೆ ಗಣಿಗಾರಿಕೆ ನಡೆಸುವ, ಅದಿರು ಸಾಗಿಸುವ ಪ್ರಸ್ತಾವ ಇಲ್ಲ. ಅದಿರು ಅರಣ್ಯ ಉತ್ಪನ್ನ ಅಲ್ಲ ಎಂಬ ಕುರಿತು ಮಾಹಿತಿ ಸಂಗ್ರಹಿಸಿ ಬಳಿಕ ಈ ಬಗ್ಗೆ ಮಾತನಾಡುತ್ತೇನೆ.
ಈಶ್ವರ ಖಂಡ್ರೆ, ಅರಣ್ಯ ಸಚಿವ

ಆದರೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯೂ ಇದಕ್ಕೆ ಸಹಮತ ನೀಡಿತ್ತು. ‘ದಿನದ 24 ಗಂಟೆ ಗಣಿಗಾರಿಕೆ ನಡೆಸುವುದರಿಂದ ರಾಜ್ಯಕ್ಕೆ ಆದಾಯ ಬರುತ್ತದೆ. ಒಡಿಶಾ, ಜಾರ್ಖಂಡ್‌ನಲ್ಲಿ ದಿನದ 24 ಗಂಟೆ ಗಣಿಗಾರಿಕೆ ನಡೆಯುತ್ತಿದೆ. ಅದನ್ನು ನಾವು ಗಮನಿಸಬೇಕು‘ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಹೇಳಿದ್ದರು. ಅಂತಿಮವಾಗಿ ಈ ವಿಷಯ ದಲ್ಲಿ ಮೇಲುಸ್ತುವಾರಿ ಸಮಿತಿಯ ಅಭಿಪ್ರಾಯ ಕೇಳಬೇಕಾಗಿಯೂ, ಒಡಿಶಾ ಮತ್ತು ಜಾರ್ಖಂಡ್‌ಗೆ ಅಧಿಕಾರಿಗಳ ತಂಡವನ್ನು ಕಳುಹಿಸಿ, ಅಲ್ಲಿನ ವ್ಯವಸ್ಥೆ ಅಧ್ಯಯನ ಮಾಡಬೇಕಾಗಿಯೂ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಅರಣ್ಯ ಇಲಾಖೆಯ ಅಧಿಕಾರಿಗಳ ಒಂದು ತಂಡ ಒಡಿಶಾ ಮತ್ತು ಜಾರ್ಖಂಡ್‌ನ ಗಣಿಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಿ ಇತ್ತೀಚೆಗಷ್ಟೇ ರಾಜ್ಯಕ್ಕೆ ಹಿಂತಿರುಗಿದೆ. ಈ ತಂಡ ಇನ್ನೂ ತನ್ನ ವರದಿ ನೀಡಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ. ಇದಿಷ್ಟೇ ಅಲ್ಲ, ಅದಿರು ಸಾಗಣೆಗೆ ‘ಮ್ಯಾನ್ಯುವಲ್‌ ಪರ್ಮಿಟ್‌’ ನೀಡುವುದನ್ನು ರದ್ದುಪಡಿಸಬೇಕು ಎಂದೂ ಆ ಸಭೆಯಲ್ಲಿ ಪ್ರತಿಪಾದಿಸಲಾಗಿತ್ತು. ಆದರೆ, ಈ ವ್ಯವಸ್ಥೆ ಜಾರಿಯಾಗಿದ್ದು ಲೋಕಾಯುಕ್ತ ವರದಿಯ ಆಧಾರದಲ್ಲಿ. ಆದ್ದರಿಂದ ವಿಷಯದ ಕುರಿತ ಚರ್ಚೆಯನ್ನು ಒಂದಷ್ಟು ದಿನದ ವರೆಗೆ ಮುಂದೂಡಲು ಸಭೆಯಲ್ಲಿ ನಿರ್ಧರಿಸಲಾಗಿತ್ತು.

‘ಅರಣ್ಯ ಉತ್ಪನ್ನ ಅಲ್ಲ’

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೂ ಪತ್ರ ಬರೆದಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ, ‘ಕಬ್ಬಿಣದ ಅದಿರನ್ನು ಅರಣ್ಯ ಉತ್ಪನ್ನವೆಂದು ಪರಿಗಣಿಸಬಾರದೆಂದು ಕಾಯ್ದೆ ತಿದ್ದುಪಡಿಗೆ ಪ್ರಸ್ತಾವನೆ ಮಂಡಿಸಬೇಕು’ ಎಂದೂ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.