ರಾಮನಗರ: ತಮ್ಮ ಪುತ್ರ ಎಲ್.ಚಂದ್ರಶೇಖರ್ ಬಿಜೆಪಿ ಅಭ್ಯರ್ಥಿಯಾಗಿ ಕಣದಿಂದ ಹಿಂದೆ ಸರಿದಿದ್ದಕ್ಕೆ ಬಹಿರಂಗವಾಗಿ ಜನರ ಕ್ಷಮೆ ಯಾಚಿಸಿದ ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ, ಪರಿಷತ್ ಸದಸ್ವತ್ವ ಅವಧಿ ಮುಗಿದ ಬಳಿಕ ರಾಜಕೀಯವಾಗಿ ನಿವೃತ್ತಿ ಹೊಂದುವುದಾಗಿಯೂ ಪ್ರಕಟಿಸಿದರು.
ಕ್ಷೇತ್ರದಲ್ಲಿನ ಈಚಿನ ರಾಜಕೀಯ ಬೆಳವಣಿಗೆಗಳ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ ಲಿಂಗಪ್ಪ, ಮಗನ ನಡೆ ಹೇಡಿತನದ ಪರಮಾವಧಿ ಎಂದು ಬೇಸರ ವ್ಯಕ್ತಪಡಿಸಿದರು. ‘ರಾಮನಗರ ಉಪ ಚುನಾವಣೆಯಲ್ಲಿ ನನ್ನ ಮಗ ದುರಂತ ನಾಯಕನ ಪಾತ್ರ ವಹಿಸಿದ್ದಾನೆ. ಇದರಿಂದಾಗಿ ನಮ್ಮ ಕುಟುಂಬದವರು ತಲೆ ಎತ್ತಿ ಓಡಾಡದಂತಹ ಪರಿಸ್ಥಿತಿ ಇದೆ. ಕ್ಷೇತ್ರದಲ್ಲಿ ನಾನು ಕಟ್ಟಿದ್ದ ಸ್ವಾಭಿಮಾನಿ ರಾಜಕೀಯದ ಕೋಟೆ ಇಂದು ಉರುಳಿಬಿದ್ದಿದೆ. ಸಾವಿರಾರು ಮತದಾರರಿಗೆ, ಬಿಜೆಪಿ ಕಾರ್ಯಕರ್ತರಿಗೂ ಇದರಿಂದ ನೋವಾಗಿದೆ, ನಾನು ಅವರೆಲ್ಲರ ಕ್ಷಮೆ ಕೋರುತ್ತೇನೆ’ ಎಂದು ಮೇಲಕ್ಕೆ ಎದ್ದು ನಿಂತು ಕೈ ಮುಗಿದರು.
ಅನಿತಾ ಕುಮಾರಸ್ವಾಮಿ ಭಾರಿ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ರನ್ನಿಂಗ್ ರೇಸ್‌ನಲ್ಲಿ ಓಡಿ ಗೆದ್ದ ಮಗ ಇಡೀ ರೇಸ್‌ನಲ್ಲಿ ತಾನೊಬ್ಬನೇ ಓಡಿದ್ದಾಗಿ ಅಪ್ಪನ ಬಳಿ ಹೇಳುವಂತ ಕಥೆ ಆಗಿದೆ’ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:‘ಕೈ’ ಹಿಡಿದ ಬಿಜೆಪಿ ಅಭ್ಯರ್ಥಿ
‘ಡಿ.ಕೆ. ಸಹೋದರರಿಗೆ ಅನಿತಾ ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸುವುದೊಂದೇ ಗುರಿ ಆಗಿತ್ತು. ನಾನು ದೂರದ ಬಳ್ಳಾರಿಯಲ್ಲಿದ್ದೆ. ಇಲ್ಲಿನ ಯಾವ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಗೊತ್ತಿರಲಿಲ್ಲ. ಸುರೇಶ್ ನನ್ನ ಮಗನನ್ನು ಹೈಜಾಕ್ ಮಾಡಿದ್ದಾರೆ ಎನ್ನುವ ಆರೋಪವನ್ನು ಒಪ್ಪಲಾಗುತ್ತಿಲ್ಲ. ನಿರಾಕರಿಸಲೂ ಆಗುತ್ತಿಲ್ಲ’ ಎಂದು ನುಡಿದರು.
‘ಚಂದ್ರಶೇಖರ್‌ನಿಂದ ಕಾಂಗ್ರೆಸ್‌ಗೆ ಆಗಬೇಕಾದದ್ದು ಏನೂ ಇಲ್ಲ. ಅವನನ್ನು ವಾಪಸ್ ಕರೆತಂದದ್ದು ಯಾಕೆ ಎಂದೂ ಗೊತ್ತಿಲ್ಲ. ಮುಂದಿನ ಚುನಾವಣೆಗಳಲ್ಲಿ ಅವನನ್ನು ಮುಂದಿಟ್ಟುಕೊಂಡು ಮತ ಕೇಳಲು ನಾಚಿಕೆ ಆಗುತ್ತದೆ. ಇನ್ನೊಂದು ಅವನ ಜೊತೆ ಮಾತನಾಡಲಾರೆ’ ಎಂದರು.
ಡಿ.ಕೆ. ಸುರೇಶ್ ನಡೆಯ ಬಗ್ಗೆಯೂ ಲಿಂಗಪ್ಪ ಅಸಮಾಧಾನ ವ್ಯಕ್ತಪಡಿಸಿದರು. ‘ಸುರೇಶ್ ತಾವು ಹೇಳಿದ್ದೆಲ್ಲವೂ ನಡೆಯುತ್ತದೆ ಎಂಬ ಧೋರಣೆಯನ್ನು ಬಿಡಬೇಕು. ತಮ್ಮ ನಡೆಯನ್ನು ಬದಲಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.