ತುಮಕೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಮಧ್ಯಾಹ್ನ ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದರು.
ಶಿವಕುಮಾರ ಸ್ವಾಮೀಜಿ ಅವರು ವಿಶ್ರಾಂತಿಯಲ್ಲಿದ್ದುದರಿಂದ ಮುಖ್ಯಮಂತ್ರಿಯವರು ಅವರನ್ನು ಮಾತನಾಡಿಸಲಿಲ್ಲ. ಸ್ವಲ್ಪ ದೂರದಿಂದಲೇ ದರ್ಶನ ಪಡೆದು ಸ್ವಾಮೀಜಿ ಪಾದಕ್ಕೆ ನಮಿಸಿದರು.
ಕಿರಿಯಶ್ರೀಗಳಾದ ಡಾ.ಸಿದ್ಧಲಿಂಗ ಸ್ವಾಮೀಜಿ ಹಾಗೂ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಪರಮೇಶ್ ಅವರಿಂದ ಸ್ವಾಮೀಜಿ ಅವರ ಆರೋಗ್ಯ ಸ್ಥಿತಿ, ಚಿಕಿತ್ಸೆ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದರು.
ಬಳಿಕ ಆಸ್ಪತ್ರೆ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ‘ಸ್ವಾಮೀಜಿ ಅವರು ಆರೋಗ್ಯವಾಗಿದ್ದು, ಭಕ್ತರು ಯಾವುದೇ ರೀತಿ ಆತಂಕ ಪಡಬೇಕಿಲ್ಲ’ ಎಂದರು.
‘ಸ್ವಾಮೀಜಿಯವರ ಆರೋಗ್ಯ ಸುಧಾರಣೆಗೆ ವೈದ್ಯರ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ವೈದ್ಯರ ತಂಡಕ್ಕೆ ಭಕ್ತರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಇಳಿ ವಯಸ್ಸಿನಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿರುವುದು ವೈದ್ಯಕೀಯ ಲೋಕಕ್ಕೆ ಅಚ್ಚರಿ ಮತ್ತು ಪವಾಡ ಸದೃಶವಾಗಿದೆ’ ಎಂದು ಹೇಳಿದರು.
ಭಕ್ತರಿಗೆ ಮನವಿ: ‘ಸ್ವಾಮೀಜಿಯವರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯತೆ ಇದೆ. ಅವರ ಆರೋಗ್ಯ ಸುಧಾರಣೆ ದೃಷ್ಟಿಯಿಂದ ಭಕ್ತರು ಭೇಟಿ ಮಾಡಲುಆಸ್ಪತ್ರೆಗೆ ಬರಬಾರದು ಎಂದು ಮನವಿ ಮಾಡುತ್ತೇನೆ’ ಎಂದರು.
ಕಡಿಮೆಯಾದ ಶ್ವಾಸಕೋಶ ಸೋಂಕು
‘ಮಠದಲ್ಲಿ ನೀಡುತ್ತಿದ್ದ ರೀತಿಯಲ್ಲಿಯೇ ಸ್ವಾಮೀಜಿಯವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ವಾಸಕೋಶದಲ್ಲಿನ ಸೋಂಕು ಕಡಿಮೆ ಆಗಿದೆ. ಆದರೆ, ‘ಅಲ್ಬುಮಿನ್’ ಪ್ರೊಟೀನ್ ಅಂಶ ಸುಧಾರಿಸುತ್ತಿಲ್ಲ. ಇದಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿದೆ. ದ್ರವರೂಪದ ಆಹಾರ ತೆಗೆದುಕೊಳ್ಳುತ್ತಿದ್ದಾರೆ. ಕುರ್ಚಿಯಲ್ಲಿ ಕುಳಿತುಕೊಂಡೇ ಇಷ್ಟಲಿಂಗ ಪೂಜೆ ಮಾಡಿದ್ದಾರೆ’ ಎಂದು ಸಿದ್ಧಗಂಗಾ ಆಸ್ಪತ್ರೆ ಮುಖ್ಯಸ್ಥ ಡಾ.ಪರಮೇಶ್ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.