ADVERTISEMENT

ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಸಿಎಂ ಕ್ರಮ ತೆಗೆದುಕೊಳ್ಳಬೇಕು: ಡಿ.ಕೆ. ಸುರೇಶ್

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 7:01 IST
Last Updated 14 ಸೆಪ್ಟೆಂಬರ್ 2024, 7:01 IST
<div class="paragraphs"><p>ಡಿ.ಕೆ. ಸುರೇಶ್</p></div>

ಡಿ.ಕೆ. ಸುರೇಶ್

   

ಬೆಂಗಳೂರು: ‘ಬಿಬಿಎಂಪಿ ಗುತ್ತಿಗೆದಾರನಿಂದ ಜೀವ ಬೆದರಿಕೆ, ಜಾತಿ ನಿಂದನೆ ಮಾಡಿದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು’ ಎಂದು ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ. ಸುರೇಶ್ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ದಲಿತ ಸಮುದಾಯಕ್ಕೆ ಮುನಿರತ್ನ ಕೀಳುಪದಗಳನ್ನು ಬಳಸಿದ್ದಾರೆ. ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಎರಡು ಜಾತಿಗಳ ಮಧ್ಯೆ ಸಂಘರ್ಷ ತರುವ ಕೆಲಸವನ್ನು ಮುನಿರತ್ನ ಮಾಡಿದ್ದಾರೆ. ಹಿಂದೆಯೂ ಅವರು ಒಕ್ಕಲಿಗ ಸಮುದಾಯವನ್ನು ಬಹಳ ಕೀಳಾಗಿ ನೋಡಿದ್ದರು. ಬಿಜೆಪಿ ನಾಯಕರು ಇದನ್ನು ಯಾವ ರೀತಿ ಅರಗಿಸಿಕೊಳ್ಳುತ್ತಿದ್ದಾರೆ? ಮುನಿರತ್ನ ವಿರುದ್ಧದ ಆರೋಪಗಳಿಗೆ ಬಿಜೆಪಿಯ ಒಬ್ಬರೇ ಒಬ್ಬರು ಹೇಳಿಕೆ ನೀಡಿಲ್ಲ. ನೈತಿಕತೆ ಇದ್ದರೆ ಇಷ್ಟೊತ್ತಿಗೆ ಪಕ್ಷದಿಂದ ವಜಾ ಮಾಡಬೇಕಿತ್ತು’ ಎಂದರು.

‘ಬಿಜೆಪಿ ನಾಯಕರು ಈ ರೀತಿ ಮಾಡುವುದು ಎಷ್ಟು ಸರಿ? ಎರಡು ಜಾತಿಗಳನ್ನು ಎತ್ತಿಕಟ್ಟುವ ಕೆಲಸ ಆಗಿದೆ. ಇನ್ನೊಂದು ಕಡೆ ಲಂಚದ ಆರೋಪ. ನೇರವಾಗಿ ದುಡ್ಡು ತಂದುಕೊಟ್ಟರೆ ಬದುಕುತ್ತೀಯಾ ಎಂದು ಮುನಿರತ್ನ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಥರ ಮಾಡಿದ್ದು ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ, ಬಿಜೆಪಿ ನಾಯಕ, ಸಿನಿಮಾ ನಿರ್ಮಾಪಕ’ ಎಂದರು.

‘ಸಾರ್ವಜನಿಕ ಜವಾಬ್ದಾರಿ ಸ್ಥಾನದಲ್ಲಿ ಇರುವ ಮಾಜಿ ಸಚಿವ, ಆರ್. ಆರ್. ನಗರ ಕ್ಷೇತ್ರದ ಶಾಸಕರಾಗಿರುವ ಮುನಿರತ್ನ ಬಹಳ ಕೀಳು ದರ್ಜೆಯ ಪದಗಳನ್ನು ಬಳಸಿದ್ದಾರೆ. ಕೀಳರಿಮೆ ಮನಸ್ಥಿತಿ ಇರುವವರೂ ಯಾರೂ ಕೂಡ ಇಂಥ ಪದ ಬಳಸಲ್ಲ. ಒಂದು ಕಡೆ ರಾಮನ ಜಪ, ಒಂದು ಕಡೆ ಸಂಸ್ಕೃತಿ ಜಪ. ಇನ್ನೊಂದು ಕಡೆ ಅದೇ ತಾಯಂದಿರನ್ನು ಮಂಚಕ್ಕೆ ಕರೆಯುವ ಮಾಜಿ ಮಂತ್ರಿ. ಆರೆಸ್ಸೆಸ್‌ ಜೊತೆಗೆ ಒಡನಾಟ ಇಟ್ಟುಕೊಂಡವರು ಇವರು’ ಎಂದರು.

‘ದಲಿತ ಸಮುದಾಯದ ಮೇಲೆ 80ರ ದಶಕದ ಬಳಿಕ ಯಾರೂ ಇಂಥ ಪದ ಬಳಸುತ್ತಿರಲಿಲ್ಲ. ದಲಿತ ಸಮುದಾಯದ ಮೇಲೆ ಇಂಥ ಪದ ಬಳಕೆ ಮಾಡುವುದು ಎಷ್ಟು ಸರಿ? ಇದಕ್ಕೆ ಬಿಜೆಪಿ ನಾಯಕರು, ಎನ್‌ಡಿಎ ನಾಯಕರು ಸ್ಪಷ್ಟವಾಗಿ ಹೇಳಬೇಕು. ನೈತಿಕತೆ ಬದ್ಧತೆ ಪ್ರದರ್ಶನ ಮಾಡಬೇಕು’ ಎಂದು ಆಗ್ರಹಿಸಿದರು.

‘ಬಿಜೆಪಿ ಒಕ್ಕಲಿಗ ನಾಯಕರು ಇದಕ್ಕೆ ಉತ್ತರ ಕೊಡಬೇಕು. ಒಕ್ಕಲಿಗ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುವುದು ಎಷ್ಟು ಸರಿ ಎಂದು ಆರ್. ಅಶೋಕ ಅವರು ಹೇಳಬೇಕು. ಒಕ್ಕಲಿಗ ಕೇಂದ್ರ ಸಚಿವರು ನಡ್ಡಾ, ಮೋದಿಯವರಿಗೆ ಈ ಬಗ್ಗೆ ವರದಿ ಕೊಡಲಿ’ ಎಂದು ಆಗ್ರಹಿಸಿದರು.‘

‘ನಾಗಮಂಗಲ ಗಲಾಟೆಯನ್ನು ಕುಮಾರಸ್ವಾಮಿಯೇ ಮಾಡಿಸಿರಬಹುದು. ಅವರ ಆರೋಪದ ಹಾಗೆಯೇ ನನ್ನದೂ ಆರೋಪ. ವಾರ ವಾರ ಇಲ್ಲಿಗೆ ಬರ್ತಾರಲ್ವಾ ಹಾಗೆ ಬಂದು ಕುಮಾರಸ್ವಾಮಿಯೇ ಗಲಾಟೆ ಮಾಡಿಸಿರಬಹುದು’ ಎಂದರು.

‘ಅಮೆರಿಕ ಭೇಟಿ ವೇಳೆ ರಾಹುಲ್‌ ಗಾಂಧಿ ಅವರನ್ನು  ಡಿ.ಕೆ. ಶಿವಕುಮಾರ್ ಭೇಟಿ ಮಾಡಿರುವುದು ಕಾಕತಾಳೀಯವಷ್ಟೇ. ಅಲ್ಲಿ ಯಾವುದೇ ರಾಜಕೀಯ ವಿಚಾರವನ್ನು ಚರ್ಚೆ ಮಾಡಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.