ಬೆಂಗಳೂರು: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಬಾರದೆಂದು ವಾಮಮಾರ್ಗದ ಮೂಲಕ ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ವಾಲ್ಮೀಕಿ ಹಗರಣಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಆದರೂ, ಈ ಪ್ರಕರಣ ಮುಂದಿಟ್ಟು ರಾಜ್ಯ ಸರ್ಕಾರವನ್ನು ದುರ್ಬಲಗೊಳಿಸುವ ಯತ್ನಗಳು ನಡೆಯುತ್ತಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಮಾಜಿ ಸಚಿವ ಬಿ. ನಾಗೇಂದ್ರ ಅವರ ಹೆಸರು ಹೇಳುವಂತೆ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿದ್ದ ಬಿ. ಕಲ್ಲೇಶಪ್ಪ ಅವರಿಗೆ ಇ.ಡಿ ಆಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಮಂಗಳವಾರ ಧರಣಿ ನಡೆಸಿದರು.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ, ‘ನನಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿದ್ದ ಕಲ್ಲೇಶ್ ಅವರನ್ನು ವಿಚಾರಣೆಗೆ ಕರೆದು ಬೆದರಿಸಿ ನನ್ನ ಹೆಸರು ಹೇಳುವಂತೆ ಒತ್ತಡ ಹೇರುತ್ತಿದ್ದಾರೆ’ ಎಂದು ದೂರಿದರು.
‘ಈ ವಿಚಾರವನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ನಾವು ಪ್ರಸ್ತಾಪಿಸುತ್ತೇವೆ. ರಾಜಕೀಯ ದ್ವೇಷ, ರಾಜಕೀಯ ಸೇಡಿನ ಬಗ್ಗೆ ತೀವ್ರವಾಗಿ ಖಂಡಿಸುತ್ತೇವೆ. ಹೈಕಮಾಂಡ್ ನಾಯಕರ ಜೊತೆಗೂ ನಾವು ಈ ಬಗ್ಗೆ ಮಾತನಾಡಿದ್ದೇವೆ. ಲೋಕಸಭೆಯಲ್ಲಿಯೂ ವಿಷಯ ಪ್ರಸ್ತಾಪಿಸಲು ಹೇಳಿದ್ದೇವೆ’ ಎಂದರು.
‘ಇ.ಡಿ ಅಧಿಕಾರಿಗಳು ಬೆದರಿಕೆ ಒಡ್ಡಿದ ಬಗ್ಗೆ ಪೊಲೀಸರಿಗೆ ಕಲ್ಲೇಶ್ ಅವರು ದೂರು ನೀಡಿದ್ದು, ಎಫ್‌ಐಆರ್ ಕೂಡ ದಾಖಲಾಗಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹುನ್ನಾರ ನಡೆಸುತ್ತಿದೆ. ಮುಖ್ಯಮಂತ್ರಿಯನ್ನು ಗುರಿ ಮಾಡಲು, ಸರ್ಕಾರ ಮತ್ತು ಮುಖ್ಯಮಂತ್ರಿಯ ವರ್ಚಸ್ಸು ಕಡಿಮೆ ಮಾಡಲು ಯತ್ನಗಳು ನಡೆಯುತ್ತಿವೆ’ ಎಂದೂ ಅವರು ಹೇಳಿದರು.
‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಎಸ್ಐಟಿ, ಸಿಬಿಐ, ಇ.ಡಿ ಹೀಗೆ ಮೂರು ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಒಂದೇ ಪ್ರಕರಣದಲ್ಲಿ ಮೂರು ತನಿಖಾ ಸಂಸ್ಥೆಗಳು ತನಿಖೆ ಮಾಡುತ್ತಿರುವುದು ವಿಶೇಷ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿಲ್ಲ ಎಂದು ನಾವು ಯಾವತ್ತೂ ಹೇಳಿಲ್ಲ’ ಎಂದರು.
‘ನಿಗಮದಲ್ಲಿ ₹ 187 ಕೋಟಿ ದುರುಪಯೋಗ ಆಗಿದೆ ಎಂದು ವಿರೋಧ ಪಕ್ಷದವರು ಪದೇ ಪದೇ ಹೇಳುತ್ತಿದ್ದಾರೆ. ಎಂ.ಜಿ ರಸ್ತೆಯ ಯೂನಿಯನ್ ಬ್ಯಾಂಕ್‌ನಿಂದ ತೆಲಂಗಾಣಕ್ಕೆ ಹೋಗಿರುವುದು ₹ 89.63 ಕೋಟಿ ಮಾತ್ರ. ನಾವು ಎಸ್ಐಟಿ ರಚನೆ ಮಾಡಿದ ಮೇಲೆ ತ್ವರಿತವಾಗಿ ತನಿಖೆ ನಡೆಯುತ್ತಿದೆ. ₹ 34 ಕೋಟಿ ನಗದು ವಸೂಲಿ ಆಗಿದೆ’ ಎಂದರು.
‘ಶೇ 90ರಷ್ಟು ಎಸ್ಐಟಿ ತನಿಖೆ ಮುಗಿದಿದೆ. ಅಕ್ರಮವಾಗಿ ಹಣ ವರ್ಗಾವಣೆಯಾಗಲು ಬ್ಯಾಂಕಿನವರು ಕಾರಣ ಎಂದು ಬ್ಯಾಂಕಿನ ಅಧಿಕಾರಿಗಳೇ ದೂರು ಕೊಟ್ಟಿದ್ದಾರೆ. ಹೀಗಾಗಿ ಸಿಬಿಐನವರು ತನಿಖೆ ಮಾಡುತ್ತಿದ್ದಾರೆ. ಇ.ಡಿ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ಶಾಸಕ ದದ್ದಲ್ ಮನೆ ಮೇಲೆ ದಾಳಿ ಮಾಡಿದ್ದಾರೆ. ನಾಗೇಂದ್ರ ಅವರನ್ನು ವಶಕ್ಕೆ ಪಡೆದು, ನ್ಯಾಯಾಂಗದ ಬಂಧನಕ್ಕೆ ಕೊಟ್ಟಿದ್ದಾರೆ. ಹಣ ವರ್ಗಾವಣೆಗೆ ಮುಖ್ಯಮಂತ್ರಿ ಆದೇಶ ಇತ್ತು ಎಂದು ಬರೆದುಕೊಡುವಂತೆ ಇ.ಡಿಯವರು ಒತ್ತಡ ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.
‘ಹಿಂದೆ ಬಿಜೆಪಿ ಅವಧಿಯಲ್ಲಿ ನಡೆದ ಹಗರಣಗಳನ್ನು ಇ.ಡಿ ತನಿಖೆ ಮಾಡಿಯೇ ಇಲ್ಲ. ಸಿಬಿಐಗೂ ಕೊಟ್ಟಿಲ್ಲ. ಕೇಂದ್ರದಲ್ಲಿ ಅವರದ್ದೇ (ಬಿಜೆಪಿ) ಸರ್ಕಾರ ಇರುವುದರಿಂದ ಈಗ ಸಿಬಿಐಗೆ ಕೊಡಿ, ಸಿಬಿಐಗೆ ಕೊಡಿ ಎಂದು ಹೇಳುತ್ತಿದ್ದಾರೆ’ ಎಂದರು.
‘ಯಾವುದು ಅಗತ್ಯ ಇದೆಯೊ ಆ ಪ್ರಕರಣಗಳನ್ನು ನಾವು ಸಿಬಿಐಗೆ ಕೊಟ್ಟಿದ್ದೇವೆ. ₹ 25 ಕೋಟಿಗಿಂತ ಹೆಚ್ಚು ಮೊತ್ತದ ಹಗರಣ ನಡೆದರೆ ಸಿಬಿಐ ಬರಬೇಕು. ಬರಲಿ, ತನಿಖೆ ಮಾಡಲಿ, ನಮ್ಮದೇನು ತಕರಾರು ಇಲ್ಲ. ಆದರೆ ಕಾನೂನು ಬಾಹಿರವಾಗಿ ಯಾರನ್ನೂ ಗುರಿಯಾಗಿಸಿಕೊಂಡು ತನಿಖೆ ಮಾಡಬಾರದು. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಹೋಗಬಾರದು’ ಎಂದರು.
‘ಕಾನೂನು ರೀತಿಯ ಹೋರಾಟ ಮಾಡಲು ನಾವು ತಯಾರಿದ್ದೇವೆ. ಯಾರ ಮುಲಾಜಿಗೂ ಒಳಗಾಗುವುದಿಲ್ಲ. ಯಾರನ್ನೂ ರಕ್ಷಣೆ ಮಾಡುವುದಿಲ್ಲ. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು’ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ವಾಲ್ಮೀಕಿ ನಿಗಮದಲ್ಲಿ ಅಧಿಕಾರಿಗಳು ಹಣ ದುರ್ಬಳಕೆ ಮಾಡಿದ್ದಾರೆ. ಇದು ಗೊತ್ತಾದ ಕೂಡಲೇ ಅವರನ್ನು ಬಂಧಿಸಿ ಶೇ 50ರಷ್ಟು ಹಣವನ್ನು ವಸೂಲಿ ಮಾಡಲಾಗಿದೆ. ತನಿಖೆ ನಡೆಸಲು ಸಿಬಿಐಗೆ ಅವಕಾಶ ಇದೆ. ಆದರೆ, ತನಿಖೆ ನಡೆಯುತ್ತಿದ್ದಾಗ ಇ.ಡಿ ಮದ್ಯಪ್ರವೇಶಿಸಿದೆ’ ಎಂದರು.
‘ವಿಚಾರಣೆ ಸಂಬಂಧದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಲೇಶಪ್ಪ ಅವರಿಗೆ ಇ.ಡಿ. ಅಧಿಕಾರಿಗಳು ಕಿರುಕುಳ ನೀಡಿದ್ದಾರೆ. ಸಿಎಂ, ಡಿಸಿಎಂ ಹೆಸರು ಹೇಳುವಂತೆ ಒತ್ತಡ ಹೇರಿದ್ದಾರೆ. ಇಲ್ಲದಿದ್ದರೆ ಏಳು ವರ್ಷ ಜೈಲಿಗೆ ಹೋಗುತ್ತಿಯಾ ಎಂದು ಬೆದರಿಸಿದ್ದಾರೆ’ ಎಂದರು.
‘ಇ.ಡಿ ಅಧಿಕಾರಿಗಳಾದ ಮಿತ್ತಲ್, ಕಣ್ಣನ್ ಎಂಬ ಅಧಿಕಾರಿ ವಿರುದ್ದ ಕಲ್ಲೇಶ್ ದೂರು ನೀಡಿದ್ದಾರೆ. ನಾವು ಕೇಂದ್ರ ಸರ್ಕಾರ, ಇ.ಡಿ ವಿರುದ್ದ ಪ್ರತಿಭಟನೆ ಮಾಡುತ್ತಿದ್ದೇವೆ. ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಯುತ್ತಿದೆ. ನಾವು ಬಿಜೆಪಿ ಕಾಲದ ಹಗರಣವನ್ನು ಬಿಚ್ಚಿಡುತ್ತೇವೆ ಎಂಬ ಭಯದಿಂದ ನಮಗೆ ಸದನದ ಒಳಗೆ ಉತ್ತರ ಕೊಡಲು ಬಿಜೆಪಿಯವರು ಬಿಟ್ಟಿಲ್ಲ’ ಎಂದರು.
ಇ.ಡಿ ಅಧಿಕಾರಿಗಳನ್ನು ಬಂಧಿಸಬೇಕೆಂದು ಆಗ್ರಹಿಸುತ್ತೀರಾ ಎಂಬ ಪ್ರಶ್ನೆಗೆ, ‘ಕಾನೂನುನಲ್ಲಿ ಏನಿದೆಯೋ ಅದರ ಪ್ರಕಾರ ಅಗುತ್ತದೆ. ಅವರು ಕಾನೂನನ್ನು ದುರುಪಯೋಗ ಮಾಡಿದ್ದಾರೆ. ನಾವು ಹಾಗೇ ಮಾಡಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.