ADVERTISEMENT

ಭಾನುವಾರದೊಳಗೆ ಸಂಪುಟ ವಿಸ್ತರಣೆ? ವರಿಷ್ಠರೊಂದಿಗೆ ಸಿದ್ದರಾಮಯ್ಯ, ಡಿಕೆಶಿ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 24 ಮೇ 2023, 13:14 IST
Last Updated 24 ಮೇ 2023, 13:14 IST
ಸಿದ್ದರಾಮಯ್ಯ, ಡಿಕೆಶಿ
ಸಿದ್ದರಾಮಯ್ಯ, ಡಿಕೆಶಿ   

ನವದೆಹಲಿ: ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹಿರಿಯ ನಾಯಕರೊಂದಿಗೆ ಗುರುವಾರ ಸಮಾಲೋಚನೆ ನಡೆಸಲಿದ್ದಾರೆ. ವರಿಷ್ಠರ ಒಪ್ಪಿಗೆ ಪಡೆದು ಭಾನುವಾರದೊಳಗೆ ಸಂಪುಟ ವಿಸ್ತರಣೆ ಮಾಡಲು ಉಭಯ ನಾಯಕರು ಉದ್ದೇಶಿಸಿದ್ದಾರೆ. 

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಜೊತೆ ಎಂಟು ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಕಳೆದ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೊದಲ ಹಂತದಲ್ಲಿ 25 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಯೋಜಿಸಲಾಗಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ನಡುವಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಎಂಟು ಮಂದಿ ಮಾತ್ರ ಸಂಪುಟ ಸೇರಿದ್ದರು. ಈ ಸಚಿವರಿಗೆ ಇನ್ನೂ ಖಾತೆಗಳ ಹಂಚಿಕೆ ಆಗಿಲ್ಲ. 

ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ಪ್ರತ್ಯೇಕವಾಗಿ ನವದೆಹಲಿಗೆ ಬುಧವಾರ ಬಂದಿದ್ದಾರೆ. ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಅವರೊಂದಿಗೆ ಗುರುವಾರ ಚರ್ಚೆ ನಡೆಸಲಿದ್ದಾರೆ. ನಂತರ, ಉಭಯ ನಾಯಕರು ಖರ್ಗೆ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ADVERTISEMENT

ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದ ಹಲವು ಹಿರಿಯ ಶಾಸಕರು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿ
ದ್ದಾರೆ. ಅಲ್ಲದೆ, ಸಂಪುಟ ಸೇರಲು ಒತ್ತಡ ಹಾಕುತ್ತಿದ್ದಾರೆ. ಹಲವು ಶಾಸಕರು ದೆಹಲಿಗೆ ದೌಡಾಯಿಸಿ ಹೈಕಮಾಂಡ್‌ ಮೇಲೆ ಒತ್ತಡ ಹೇರುವ ಪ್ರಯತ್ನ ಆರಂಭಿಸಿದ್ದಾರೆ. 

‘ಮುಖ್ಯಮಂತ್ರಿ ಸೇರಿ ಒಟ್ಟು 34 ಸದಸ್ಯರಿಗೆ ಸಂಪುಟದಲ್ಲಿ ಅವಕಾಶವಿದೆ. ಸಂಪುಟಕ್ಕೆ ಮತ್ತೆ 20 ಮಂದಿಯನ್ನು ಸೇರಿಸಿಕೊಳ್ಳಲು ಉದ್ದೇಶಿಸಲಾಗಿದೆ. ಅತೃಪ್ತರನ್ನು ಸಮಾಧಾನಪಡಿಸಲು ನಾಲ್ಕು ಸ್ಥಾನಗಳನ್ನು ಖಾಲಿ ಬಿಡಲಾಗುವುದು’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.