ಬೆಂಗಳೂರು: ನಟ, ರಾಜಕಾರಣಿ ಕೆ.ಶಿವರಾಮ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
71 ವರ್ಷದ ಕೆ.ಶಿವರಾಮ್ ಅವರು ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯಲ್ಲಿ ಗುರುವಾರ ಹೃದಯಾಘಾತದಿಂದ ನಿಧನರಾದರು. ಶಿವರಾಮ್ ಅವರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ.
‘ಶಿವರಾಮ್ ಅವರನ್ನು ಫೆಬ್ರುವರಿ 3ರಂದು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರು ದಿನದ ಹಿಂದೆ ಅವರಿಗೆ ಹೃದಯಾಘಾತ ಆಗಿತ್ತು. ಗುರುವಾರ ಮತ್ತೆ ಹೃದಯಾಘಾತವಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ’ ಎಂದು ಅವರ ಅಳಿಯ ಪ್ರದೀಪ್ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಐಎಎಸ್ ಪರೀಕ್ಷೆ ಪೂರೈಸಿದ ಮೊದಲಿಗ ಎಂಬ ಖ್ಯಾತಿ ಗಳಿಸಿದ್ದ ಅವರು, 1993ರಲ್ಲಿ ಅಧಿಕಾರದಲ್ಲಿರುವಾಗಲೇ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ‘ಪ್ರತಿಭಟನೆ’, ‘ಖಳನಾಯಕ’, ‘ಯಾರಿಗೆ ಬೇಡ ದುಡ್ಡು’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. 2017ರಲ್ಲಿ ಬಿಡುಗಡೆಯಾದ ‘ಟೈಗರ್’ ಅವರ ಕೊನೆಯ ಸಿನಿಮಾ.
‘ಮಾಜಿ ಐಎಎಸ್ ಅಧಿಕಾರಿ, ಬಿಜೆಪಿ ನಾಯಕ ಕೆ.ಶಿವರಾಮ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಶಿವರಾಂಮ್ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಹೆಸರಾಂತ ಕಲಾವಿದ, ಪಕ್ಷದ ಮುಖಂಡ, ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಯಶಸ್ವಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಹೃದಯಾಘಾತದಿಂದ ನಿಧನರಾದ ಸುದ್ದಿ ಅತೀವ ಆಘಾತ ತಂದಿದೆ. ಅವರು ಅಸ್ವಸ್ಥರಾದ ವಿಷಯ ತಿಳಿದು ಗುರುವಾರ ಆಸ್ಪತ್ರೆಗೆ ತೆರಳಿ ಅವರನ್ನು ನೋಡಿ, ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದೆ. ಆದರೆ, ವಿಧಿ ಅವರನ್ನು ಬೇಗ ಕರೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಕುಟುಂಬದವರಲ್ಲಿ ಹಾಗು ಅಭಿಮಾನಿಗಳಲ್ಲಿ ನನ್ನ ಸಂತಾಪಗಳನ್ನು ಸಲ್ಲಿಸುತ್ತೇನೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
‘ವಿಶ್ರಾಂತ ಐಎಎಸ್ ಅಧಿಕಾರಿಗಳು, ರಾಜಕೀಯ ನಾಯಕರು, ಪ್ರಖ್ಯಾತ ಚಿತ್ರನಟರೂ ಆಗಿದ್ದ ನಮ್ಮ ರಾಮನಗರ ಜಿಲ್ಲೆಯವರೇ ಅದ ಕೆ.ಶಿವರಾಮ್ ಅವರ ನಿಧನ ನನಗೆ ಆಘಾತ ಉಂಟು ಮಾಡಿದೆ. ಸಂಘರ್ಷದಿಂದಲೇ ಬಹಳ ಎತ್ತರಕ್ಕೇರಿದ್ದ ಶಿವರಾಮ್ ಅವರು, ಕನ್ನಡದಲ್ಲಿ ಐಎಎಸ್ ಮಾಡಿದ ಮೊದಲಿಗರು. ಆ ಮೂಲಕ ಅವರು ಅಸಂಖ್ಯಾತ ಯುವಜನರಿಗೆ ಪ್ರೇರಣೆಯಾಗಿದ್ದರು. ಚಲನಚಿತ್ರ ನಟರಾಗಿಯೂ ಅವರು ಬಹುದೊಡ್ಡ ಹೆಸರು ಮಾಡಿದ್ದರು. ‘ಬಾ ನಲ್ಲೆ ಮಧುಚಂದ್ರಿಕೆ’, ‘ವಸಂತ ಕಾವ್ಯ’ ಸೇರಿ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಅಭಿಮಾನಿಗಳು, ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಇಂದು (ಶುಕ್ರವಾರ) ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.