ADVERTISEMENT

ಗಣಿಬಾಧಿತ ಪ್ರದೇಶಗಳ ಪುನಶ್ಚೇತನಕ್ಕೆ ಅನುದಾನ ಬಳಕೆಯಲ್ಲಿ ವಿಳಂಬ ಧೋರಣೆ: ಸಿಎಂ ಗರಂ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 2:12 IST
Last Updated 27 ಜೂನ್ 2024, 2:12 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಗಣಿಬಾಧಿತ ಪ್ರದೇಶಗಳ ಸಮಗ್ರ ಪರಿಸರ ಯೋಜನೆ (ಸೆಪ್‌ಮಿಜ್‌) ಅಡಿಯಲ್ಲಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ (ಕೆಎಂಇಆರ್‌ಸಿ) ಬಳಿ ಲಭ್ಯವಿರುವ ಅನುದಾನ ಬಳಕೆಯಲ್ಲಿ ವಿಳಂಬ ಮಾಡುತ್ತಿರುವ ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಎಂಇಆರ್‌ಸಿ ಅಧಿಕಾರಿಗಳು ಮತ್ತು ವಿವಿಧ ಇಲಾಖಾ ಮುಖ್ಯಸ್ಥರ ಜತೆ ಬುಧವಾರ ಸಭೆ ನಡೆಸಿದ ಮುಖ್ಯಮಂತ್ರಿ, ಸೆಪ್‌ಮಿಜ್‌ ಅನುದಾನ ಬಳಕೆಯ ಪ್ರಗತಿ ಪರಿಶೀಲಿಸಿದರು. ವರ್ಷ ಕಳೆದರೂ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಅನುಮೋದಿಸದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳನ್ನು ತರಾಟೆಗೆ ತೆಗೆದುಕೊಂಡರು.

ನಿಗಮದ ಬಳಿ ₹24,996 ಕೋಟಿ ಲಭ್ಯವಿದೆ. ₹7,928 ಕೋಟಿ ಮೊತ್ತದ 358 ಯೋಜನೆಗಳಿಗೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ನೇತೃತ್ವದ ಮೇಲ್ವಿಚಾರಣಾ ಪ್ರಾಧಿಕಾರ ಅನುಮತಿ ನೀಡಿದೆ. ಈ ಪೈಕಿ ₹3,469 ಕೋಟಿ ವೆಚ್ಚದ 182 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 135 ಯೋಜನೆಗಳಿಗೆ ಟೆಂಡರ್‌ ಆಹ್ವಾನಿಸಿದ್ದು, 47 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. 23 ಕಾಮಗಾರಿಗಳನ್ನು ವಿವಿಧ ಸಂಸ್ಥೆಗಳಿಗೆ ವಹಿಸಲಾಗಿದೆ ಎಂಬ ಮಾಹಿತಿಯನ್ನು ನಿಗಮದ ಅಧಿಕಾರಿಗಳು ನೀಡಿದರು.

ADVERTISEMENT

ಡಿಪಿಆರ್‌ ಅನುಮೋದನೆಗೆ ಗಡುವು:

ಹೆಚ್ಚಿನ ಯೋಜನೆಗಳು, ಕಾಮಗಾರಿಗಳಿಗೆ ಇಲಾಖಾ ಕಾರ್ಯದರ್ಶಿಗಳು ಡಿಪಿಆರ್‌ಗಳಿಗೆ ಅನುಮೋದನೆ ನೀಡಿಲ್ಲ ಎಂಬುದನ್ನು ತಿಳಿದ ಮುಖ್ಯಮಂತ್ರಿಯವರು, ಸಭೆಯಲ್ಲಿದ್ದ ಅಧಿಕಾರಿಗಳ ಮೇಲೆ ಹರಿಹಾಯ್ದರು. ಅನುದಾನ ಲಭ್ಯವಿದ್ದರೂ ಡಿಪಿಆರ್‌ ಅನುಮೋದಿಸದೇ ವಿಳಂಬ ಮಾಡುತ್ತಿರುವುದರ ಹಿಂದಿನ ಕಾರಣ ಏನು ಎಂದು ಪ್ರಶ್ನಿಸಿದರು ಎಂದು ಮುಖ್ಯಮಂತ್ರಿಯವರ ಸಚಿವಾಲಯದ ಮೂಲಗಳು ತಿಳಿಸಿವೆ.

‘ಮುಖ್ಯಮಂತ್ರಿಯವರು ಡಿಪಿಆರ್‌ ಅನುಮೋದನೆಗೆ ಕೆಲವು ಇಲಾಖೆಗಳಿಗೆ ವಾರದ ಗಡುವು ನೀಡಿದ್ದಾರೆ. ಇನ್ನೂ ಕೆಲವು ಇಲಾಖೆಗಳಿಗೆ ತಿಂಗಳವರೆಗೂ ಗಡುವು ನೀಡಿದ್ದಾರೆ. ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ಸೆಪ್‌ಮಿಜ್‌ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿರುವ ಎಲ್ಲ ಇಲಾಖೆಗಳೂ ಯೋಜನಾ ಮೇಲ್ವಿಚಾರಣಾ ಘಟಕ ಸ್ಥಾಪಿಸಬೇಕು. ವಸತಿ ಯೋಜನೆಗಳ ಫಲಾನುಭವಿಗಳನ್ನು ತ್ವರಿತವಾಗಿ ಗುರುತಿಸಬೇಕು. ಶಾಲಾ ಕೊಠಡಿ ನಿರ್ಮಾಣ, ಕಟ್ಟಡಗಳ ದುರಸ್ತಿ, ಪ್ರಯೋಗಾಲಯ ಸ್ಥಾಪನೆ, ಅಂಗನವಾಡಿ ಮತ್ತು ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಕಾರ್ಯದರ್ಶಿ ಕೆ.ವಿ. ತ್ರಿಲೋಕಚಂದ್ರ, ಕೆಎಂಇಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಗುರುಪ್ರಸಾದ್‌ ಎಂ.ಪಿ. ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.