ADVERTISEMENT

ನೆಲ, ಜಲ ರಕ್ಷಣೆಗೆ ಒಕ್ಕೊರಲಿನಿಂದ ಪ್ರಯತ್ನಿಸಿ: ರಾಜ್ಯದ ಸಂಸದರ ಜತೆ ಸಿಎಂ ಸಭೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 23:30 IST
Last Updated 27 ಜೂನ್ 2024, 23:30 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ನವದೆಹಲಿ: ‘ರಾಜ್ಯದ ನೆಲ, ಜಲ, ಸಂಸ್ಕೃತಿ, ಸಂಪನ್ಮೂಲದ ಅಭಿವೃದ್ಧಿಗಾಗಿ ರಾಜ್ಯದ ಸಂಸದರೆಲ್ಲರೂ ಒಕ್ಕೊರಲಿನಿಂದ ಒಂದೇ ಧ್ವನಿಯಲ್ಲಿ ಪ್ರಯತ್ನಿಸುವ ಅಗತ್ಯವಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನವದೆಹಲಿಯಲ್ಲಿ ಗುರುವಾರ ನಡೆದ ರಾಜ್ಯದ ಸಂಸದರ ಜತೆಗಿನ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ADVERTISEMENT

‘ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಅಗತ್ಯವಿದೆ. ಭದ್ರಾ ಯೋಜನೆ ಬಗ್ಗೆಯೂ ಪ್ರಯತ್ನ ಮುಂದುವರಿಸಬೇಕಾಗಿದೆ. ಕೇಂದ್ರದ ಬಜೆಟ್‌ನಲ್ಲೇ ಘೋಷಣೆ ಮಾಡಿ ಒಂದು ವರ್ಷ ಕಳೆದಿದೆ’ ಎಂದರು.  ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಕೊಡಿಸಲು ಸಭೆಯಲ್ಲಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಿದ್ದರಾಮಯ್ಯ ಮನವಿ ಮಾಡಿದರು.

’ಕಲ್ಯಾಣ ಕರ್ನಾಟಕದ ರಾಯಚೂರಿಗೆ ಏಮ್ಸ್ ನೀಡಲು ಮನವಿ ಸಲ್ಲಿಸಿದ್ದೇವೆ. ಇದರ ಈಡೇರಿಕೆ ಅಗತ್ಯವಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಲ್ಯಾಣ ಕರ್ನಾಟಕ ಹಿಂದುಳಿದಿದೆ. ಏಮ್ಸ್ ಬಂದರೆ ಅಭಿವೃದ್ಧಿ ಸಾಧ್ಯ’ ಎಂದರು.

‘18,172 ಕೋಟಿ ಬರ ಪರಿಹಾರ ಕೇಳಿದ್ದೆವು. ಪೂರ್ತಿ ಬಂದಿಲ್ಲ. ಇದಕ್ಕಾಗಿ ಪ್ರಯತ್ನಿಸುವ ಅಗತ್ಯವಿದೆ’ ಎಂದು ಹೇಳಿದರು.

‘ರಾಜ್ಯದ ಕರಾವಳಿ ಭಾಗಗಳ ಅಭಿವೃದ್ಧಿಗಾಗಿ ಉಡಾನ್ ಯೋಜನೆಯಲ್ಲಿ ಸಲ್ಲಿಸಿರುವ ಪ್ರಸ್ತಾವನೆ ನಾಗರಿಕ ವಿಮಾನಯಾನ ಇಲಾಖೆಯಲ್ಲಿ ಬಾಕಿ ಇದೆ. ಇದರ ಈಡೇರಿಕೆಗೆ ಪ್ರಯತ್ನಿಸಬೇಕಾಗಿದೆ’ ಎಂದು ಸಭೆಯ ಗಮನಕ್ಕೆ ತಂದರು.

‘ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಏರ್ ಕಾರ್ಗೊ ಕಾಂಪ್ಲೆಕ್ಸ್ ಆಗಿ ಪರಿಗಣಿಸಲು ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದರಿಂದ ರಫ್ತು ಹೆಚ್ಚಾಗಿ ಆರ್ಥಿಕ ಚಟುವಟಿಕೆ ವೇಗಗೊಳ್ಳುತ್ತದೆ’ ಎಂದು ಅವರು ಹೇಳಿದರು.

‘ಮೈಸೂರು ಅಥವಾ ಹಾಸನಕ್ಕೆ ಮತ್ತೊಂದು ಐಐಟಿ ಬೇಕು ಎಂಬ ಪ್ರಸ್ತಾವ ಸಲ್ಲಿಸಿದ್ದೇವೆ. ಇದು ಈಡೇರಿಸಬೇಕಾಗಿದೆ. ಕಸ್ತೂರಿ ರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ಮನವಿ ಮಾಡಿದ್ದೇವೆ. ಇದನ್ನು ಕೂಡಲೇ ಅಂಗೀಕರಿಸಿ ಪಶ್ಚಿಮ‌ಘಟ್ಟದ ಜನರಿಗೆ ನೆಮ್ಮದಿ ಒದಗಿಸಬೇಕು’ ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದರು.

‘ರಾಜ್ಯವು ರೈಲ್ವೆ ಸಂಪರ್ಕದಲ್ಲಿ ಹಿಂದುಳಿದಿದೆ. ಆದ್ದರಿಂದ, ಆದ್ಯತೆ ಮೇಲೆ ರಾಜ್ಯಕ್ಕೆ ಹೆಚ್ಚು ಅನುದಾನ ಒದಗಿಸಿ ರೈಲ್ವೆ ಸಂಪರ್ಕ ಹೆಚ್ಚಿಸಲು ಆಧ್ಯತೆ ಮೇಲೆ ಹೆಚ್ಚಿನ ಅನುದಾನ ನೀಡಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಸಿದ್ದರಾಮಯ್ಯ ಮನವಿ ಮಾಡಿದರು.

‘15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು 16ನೇ ಆಯೋಗದ ಮುಂದೆ ಪ್ರಬಲ ವಾದ ಮಂಡಿಸಬೇಕಾಗಿದೆ’ ಎಂದರು.

‘ಈ ಎಲ್ಲ ಬೇಡಿಕೆ, ಯೋಜನೆ, ಪ್ರಸ್ತಾವನೆಗಳ ಮಂಜೂರಾತಿಗೆ ಮನವಿ ಮಾಡುತ್ತೇನೆ. ಈ ಮನವಿಗಾಗಿ ಈ ಸೌಹಾರ್ದಯುತ ಸಭೆ ನಡೆಸುತ್ತಿದ್ದೇವೆ. ರಾಜ್ಯದ ಅಭಿವೃದ್ಧಿ ಒಂದೇ ನಮ್ಮ ಗುರಿ. ಇದರಲ್ಲಿ ರಾಜಕೀಯ, ಟೀಕೆ, ಭಾವನಾತ್ಮಕ ಆರೋಪಗಳ ಅಗತ್ಯವಿಲ್ಲ. ರಾಜ್ಯದ ಅಭಿವೃದ್ಧಿಗೆ ಸೌಹಾರ್ದಯುತವಾಗಿ ಪ್ರಯತ್ನಿಸೋಣ’ ಎಂದು ಮನವಿ ಮಾಡಿದರು.

ರಾಜ್ಯದ ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ.ದೇವೇಗೌಡ, ಡಾ.ಡಿ.ವೀರೇಂದ್ರ ಹೆಗ್ಗಡೆ, ರಮೇಶ ಜಿಗಜಿಣಗಿ, ಕೋಟ ಶ್ರೀನಿವಾಸ ಪೂಜಾರಿ, ಬಿ ವೈ ರಾಘವೇಂದ್ರ, ಪ್ರಿಯಾಂಕಾ ಜಾರಕಿಹೊಳಿ ಸಭೆಯಲ್ಲಿ ಭಾಗವಹಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.