ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಮೈದ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಅವರು ಜಾರಿ ನಿರ್ದೇಶನಾಲಯದ (ಇ.ಡಿ.) ಎದುರು ಸೋಮವಾರ ಹಾಜರಾಗಿ, ವಿಚಾರಣೆ ಎದುರಿಸಿದರು.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ಬದಲಿ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಲೋಕಾಯುಕ್ತ ಪೊಲೀಸರು ಹಾಗೂ ಇ.ಡಿ ದಾಖಲಿಸಿರುವ ಪ್ರತ್ಯೇಕ ಪ್ರಕರಣಗಳಲ್ಲಿ ಮಲ್ಲಿಕಾರ್ಜುನಸ್ವಾಮಿ ಮೂರನೇ ಆರೋಪಿಯಾಗಿದ್ದಾರೆ.
ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3 ಎಕರೆ 16 ಗುಂಟೆ ಜಮೀನನ್ನು ಮಲ್ಲಿಕಾರ್ಜುನ ಸ್ವಾಮಿ ಅವರು ದೇವರಾಜು ಎಂಬುವವರಿಂದ ಖರೀದಿಸಿದ್ದರು. ಕೆಲವು ವರ್ಷಗಳ ಬಳಿಕ ಆ ಜಮೀನನ್ನು ಸಹೋದರಿ ಪಾರ್ವತಿ ಅವರಿಗೆ ದಾನವಾಗಿ ನೀಡಿದ್ದರು. ಅದೇ ಜಮೀನಿನಲ್ಲಿ ಮುಡಾ ಅನಧಿಕೃತವಾಗಿ ಬಡಾವಣೆ ನಿರ್ಮಿಸಿದೆ ಎಂಬ ಕಾರಣಕ್ಕಾಗಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರದಲ್ಲಿ 14 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು.
ವಿಚಾರಣೆಗೆ ಹಾಜರಾಗುವಂತೆ ಇ.ಡಿ ಅಧಿಕಾರಿಗಳು ಮಲ್ಲಿಕಾರ್ಜುನಸ್ವಾಮಿ ಅವರಿಗೆ ನೋಟಿಸ್ ಜಾರಿಗೊಳಿಸಿದ್ದರು. ಶಾಂತಿನಗರದಲ್ಲಿರುವ ಇ.ಡಿ ಸೋಮವಾರ ಮಧ್ಯಾಹ್ನ ಹಾಜರಾದರು. ಐದು ಗಂಟೆಗಳ ಕಾಲ ತನಿಖಾ ತಂಡ ಅವರನ್ನು ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡಿತು.
‘ಪರಿಶಿಷ್ಟ ಜಾತಿಯ ಕುಟುಂಬಕ್ಕೆ ಮಂಜೂರಾಗಿದ್ದ ಜಮೀನಿನ ಖರೀದಿ, ಜಮೀನು ಖರೀದಿಗೆ ಬಳಸಿದ ಹಣದ ಮೂಲ, ಆ ಬಳಿಕ ಸಹೋದರಿ ಪಾರ್ವತಿ ಅವರಿಗೆ ಜಮೀನನ್ನು ದಾನವಾಗಿ ನೀಡಿರುವುದು ಸೇರಿದಂತೆ ಹಲವು ವಿಷಯಗಳ ಕುರಿತು ಮಲ್ಲಿಕಾರ್ಜುನಸ್ವಾಮಿ ಅವರನ್ನು ಪ್ರಶ್ನಿಸಿ, ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಮುಡಾ ಮಾಜಿ ಆಯುಕ್ತರಾದ ಡಿ.ಬಿ. ನಟೇಶ್, ದಿನೇಶ್ ಕುಮಾರ್, ಅವರ ಆಪ್ತರು, ಬೆಂಗಳೂರು, ಮೈಸೂರು ಮತ್ತು ಮಂಡ್ಯದಲ್ಲಿನ ಕೆಲವು ಬಿಲ್ಡರ್‌ಗಳ ಮನೆ, ಕಚೇರಿಗಳ ಮೇಲೆ ದಾಳಿಮಾಡಿದ್ದ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದರು. ಮುಡಾ ಕಚೇರಿಯಲ್ಲೂ ಶೋಧ ನಡೆಸಲಾಗಿತ್ತು. ದಾಳಿ ವೇಳೆ ವಶಕ್ಕೆ ಪಡೆದ ದಾಖಲೆಗಳ ಆಧಾರದಲ್ಲೂ ಮಲ್ಲಿಕಾರ್ಜುಸ್ವಾಮಿ ಅವರನ್ನು ಪ್ರಶ್ನಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.