ಬೆಂಗಳೂರು: ರಾಜ್ಯದ ಖಾಸಗಿ ಕಂಪನಿಗಳ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇಕಡ 100ರಷ್ಟು ಮೀಸಲಾತಿ ನೀಡುವ ಮಸೂದೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸಂಜೆ ಎಕ್ಸ್‌ನಲ್ಲಿ ಮಾಡಿದ್ದ ಪೋಸ್ಟ್ ಅನ್ನು ಬುಧವಾರ ಅಳಿಸಿ ಹಾಕಿದ್ದಾರೆ.
ಮುಖ್ಯಮಂತ್ರಿ ಮಾಡಿದ್ದ ಎಕ್ಸ್ ಪೋಸ್ಟ್‌ಗೆ ಉದ್ಯಮ ವಲಯದಿಂದ ವ್ಯಾಪಕವಾದ ಆಕ್ಷೇಪ ವ್ಯಕ್ತವಾಗಿತ್ತು. ಈ ರೀತಿಯ ಕ್ರಮದಿಂದ ಐಟಿ ಉದ್ಯಮಕ್ಕೆ ತೊಂದರೆಯಾಗುತ್ತದೆ. ಉದ್ಯಮವು ಗುಣಮಟ್ಟದ ಸೇವೆ ನೀಡಲು ಸಮಸ್ಯೆಯಾಗುತ್ತದೆ ಎಂದು ಹಲವು ಉದ್ಯಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಮಣಿಪಾಲ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಮೋಹನದಾಸ್ ಪೈ, ‘ಇದು ತಾರತಮ್ಯದಿಂದ ಕೂಡಿದ ಮಸೂದೆ’ ಎಂದು ಟೀಕಿಸಿದ್ದಾರೆ.
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ‘ಒಂದು ಟೆಕ್ ಕೇಂದ್ರವಾಗಿ ಇಲ್ಲಿಗೆ ಕೌಶಲಭರಿತ ನೌಕರರ ಅಗತ್ಯವಿದೆ. ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ಒತ್ತಾಸೆಯಲ್ಲಿ ಮಾಹಿತಿ ತಂತ್ರಜ್ಞಾನ ಸೇವೆಯಲ್ಲಿ ನಮ್ಮ ಅಗ್ರಸ್ಥಾನಕ್ಕೆ ಧಕ್ಕೆ ಮಾಡಿಕೊಳ್ಳಲಾಗದು. ಕೌಶಲಯುಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರಬೇಕು’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಸೋಚಾಮ್ ಅಧ್ಯಕ್ಷ ಆರ್.ಕೆ.ಮಿಶ್ರಾ, ‘ಇದೊಂದು ಮಹತ್ವದ ನಡೆ. ಸ್ಥಳೀಯರಿಗೆ ಮೀಸಲಾತಿಯ ಮೇಲ್ವಿಚಾರಣೆ ನಡೆಸಲು ಎಲ್ಲಾ ಖಾಸಗಿ ಕಂಪನಿಗಳಲ್ಲಿ ಸರ್ಕಾರಿ ಅಧಿಕಾರಿಗಳನ್ನು ನಿಯೋಜನೆ ಮಾಡಿಬಿಡಿ. ಇದು ಇಲ್ಲಿನ ಐ.ಟಿ ಉದ್ಯಮವನ್ನು ಓಡಿಸುತ್ತದೆ. ಇದೊಂದು ದೂರದೃಷ್ಟಿಯಿಲ್ಲದ ನಡೆ’ ಎಂದು ಲೇವಡಿ ಮಾಡಿದ್ದಾರೆ.
ಆಕ್ಷೇಪಗಳು ತೀವ್ರವಾದ ನಂತರ ಸಿದ್ದರಾಮಯ್ಯ ಬುಧವಾರ ಮಧ್ಯಾಹ್ನ, ‘ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ 50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ 75 ಮೀಸಲಾತಿ ನಿಗದಿಪಡಿಸುವ ಮಸೂದೆಗೆ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ’ ಎಂದು ಮತ್ತೊಂದ್ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.