ADVERTISEMENT

ಸಿದ್ದರಾಮಯ್ಯ ಮೇಲುಗೈ; ಕೈತಪ್ಪಿದವರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 27 ಮೇ 2023, 19:30 IST
Last Updated 27 ಮೇ 2023, 19:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ತಮ್ಮ ಆಪ್ತರನ್ನು ಸೇರಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ. ಸಂಪುಟ ರಚನೆ, ವಿಸ್ತರಣೆಯಲ್ಲಿ ಮುಖ್ಯಮಂತ್ರಿಗಿರುವ ಪ‍ರಮಾಧಿಕಾರ ಬಳಸಿ, ಜೊತೆಗೆ ನಿಂತ ಬೆಂಬಲಿಗರಿಗೆ ಸ್ಥಾನ ಕೊಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಆಕಾಂಕ್ಷಿಗಳನ್ನು ಸಮಾಧಾನಪಡಿಸಲು ಹಿಂದಿನ ದಿನಮಾನಗಳಲ್ಲಿ ಎರಡು–ಮೂರು ಸಚಿವ ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳಲಾಗುತ್ತಿತ್ತು. ಹೀಗಾಗಿ, ಆಕಾಂಕ್ಷಿಗಳು ಮತ್ತೆ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿರುತ್ತಿದ್ದರು. ಈ ಬಾರಿ ಸಂಪುಟ ಸಂಖ್ಯಾಬಲದ ಎಲ್ಲ ಸ್ಥಾನಗಳನ್ನೂ ಭರ್ತಿ ಮಾಡಲಾಗಿದೆ. ಹೀಗಾಗಿ, ಅವಕಾಶ ಕೈತಪ್ಪಿದವರು ತಮ್ಮ ಅಸಮಾಧಾನವನ್ನು ಹೊರಗೆಡಹಿದ್ದಾರೆ. ಆಕಾಂಕ್ಷಿಗಳ ಬೆಂಬಲಿಗರು ರಾಜ್ಯದ ಕೆಲವೆಡೆ ಪ್ರತಿಭಟನೆಗಳನ್ನೂ ನಡೆಸಿದ್ದಾರೆ.

ಸಂಪ್ರದಾಯ ಮುರಿದಿದ್ದಾರೆ: ‘ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ, ಸಭಾ ನಾಯಕನನ್ನು ಸಚಿವರನ್ನಾಗಿ ಮಾಡುವ ಸಂಪ್ರದಾಯ ಹಿಂದಿನಿಂದಲೂ ಇತ್ತು. ಮುಖ್ಯಮಂತ್ರಿ ಆ ಸಂಪ್ರದಾಯ ಮುರಿದಿದ್ದಾರೆ. ಸಚಿವ ಸ್ಥಾನ ಮುಖ್ಯಮಂತ್ರಿಯ ಪರಮಾಧಿಕಾರ. ನಾನೆಂದೂ ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ. ಪರಿಷತ್‌ನಲ್ಲಿ ಸಭಾನಾಯಕರನ್ನಾಗಿ ಯಾರನ್ನು ಮಾಡಬೇಕೆಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರನ್ನೇ ಕೇಳಿ’ ಎಂದು ಬಿ.ಕೆ. ಹರಿಪ್ರಸಾದ್‌ ಹೇಳಿದರು.

ADVERTISEMENT

‘ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಡಲು ನಾನು ಬಾಡಿಗೆ ಮನೆಯಿಂದ ಬಂದವನಲ್ಲ. ಸ್ವಂತ ಮನೆಯಲ್ಲಿದ್ದೇನೆ. ನನ್ನ ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೂ, ಅಹಿಂದ ರಾಜಕೀಯಕ್ಕೂ ವ್ಯತ್ಯಾಸ ಇದೆ. ನಾನು ಕಾಂಗ್ರೆಸ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದೇನೆ. ಎಲ್ಲಿಯವರೆಗೂ ಇರು ಅಂತಾರೊ, ಅಲ್ಲಿಯವರೆಗೂ ನಾನು ಇರುತ್ತೇನೆ. ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ’ ಎಂದರು.

ಪಟ್ಟಿಯಲ್ಲಿ ಹೆಸರಿತ್ತು: ‘ನನಗೆ ಸಚಿವ ಸ್ಥಾನ ಸಿಗದಿರುವುದು ಸಹಜವಾಗಿ ಅಸಮಾಧಾನ ತಂದಿದೆ. ನಾನು ಪ್ರಾಮಾಣಿಕ ಕಾಂಗ್ರೆಸ್ಸಿಗ. ದುಡಿದು ಪಕ್ಷಕ್ಕೆ ಶಕ್ತಿ ತುಂಬಿದ್ದೇನೆ. ದೆಹಲಿಯಲ್ಲಿ ವಿಮಾನ ಹತ್ತುವವರೆಗೂ ಸಂಭವನೀಯರ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆ ನಂತರ ಏನಾಯಿತೆಂದು ಗೊತ್ತಿಲ್ಲ’ ಎಂದು ಟಿ.ಬಿ. ಜಯಚಂದ್ರ ಆಕ್ರೋಶ ವ್ಯಕ್ತಪಡಿಸಿದರು.

ನನಗೆ ಬೇಸರ ತಂದಿದೆ: ‘ವಿಧಾನ ಪರಿಷತ್‌ನ ಮೂವರು ಸದಸ್ಯರಿಗೆ ಸಚಿವ ಸ್ಥಾನ ನೀಡುವ ಕುರಿತು ಚರ್ಚೆ ನಡೆದಿತ್ತು. ಆದರೆ, ಪರಿಷತ್‌ನಿಂದ ಯಾರನ್ನೂ ಪರಿಗಣಿಸಿಲ್ಲ. ಇದು ನನಗೆ ಬೇಸರ ತಂದಿದೆ. ಮುಂದಿನ ದಿನಗಳಲ್ಲಿ ಏನಾಗುತ್ತೋ ಕಾದು ನೋಡಿ’ ಎಂದು ಪರಿಷತ್‌ ಸದಸ್ಯ ಸಲೀಂ ಅಹಮ್ಮದ್ ಅಸಮಾಧಾನ ಹೊರಹಾಕಿದರು.

ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಅವರ ಮತ್ತು ಪುತ್ರ, ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಅವರ ಭಾವಚಿತ್ರ ಹಿಡಿದು ಬೆಂಬಲಿಗರು ರಾಜಭವನದ ಎದುರು ಘೋಷಣೆ ಕೂಗಿದರು.

ಮೈಸೂರಿನ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದ ತನ್ವೀರ್ ಸೇಠ್‌ ಬೆಂಬಲಿಗರು, ‘ಸತತ ಆರು ಬಾರಿ ಗೆದ್ದಿದ್ದರೂ ಸಚಿವ ಸ್ಥಾನ ನೀಡದಿರುವುದು ಸರಿಯಲ್ಲ’ ಎಂದರು. ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದ ಉಪ್ಪಾರ ಸಮಾಜದ ಮುಖಂಡರು, ‘ರಾಜ್ಯದಲ್ಲಿ 40 ಲಕ್ಷದಷ್ಟು ಜನರಿರುವ ಸಮಾಜದ ಏಕೈಕ ಪ್ರತಿನಿಧಿ ಪುಟ್ಟರಂಗಶೆಟ್ಟರ ಹೆಸರನ್ನು ಕೈಬಿಟ್ಟು ‌‌ಅನ್ಯಾಯ ಮಾಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ಸಿಗದಿರುವುದಕ್ಕೆ ಅಸಮಾಧಾನ ಹೊರಹಾಕಿದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ , ‘ಕೊಡಗಿಗೆ ಅನ್ಯಾಯವಾಗಿದೆ‌. ಮುಂದಿನ ದಿನಗಳಲ್ಲಿ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.