ADVERTISEMENT

ಪರಿಶಿಷ್ಟ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಏಕೆ ಏರುತ್ತಿಲ್ಲ:ಸಿದ್ದರಾಮಯ್ಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.&nbsp;</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. 

   

ಬೆಂಗಳೂರು: ಪರಿಶಿಷ್ಟಜಾತಿ– ಪಂಗಡಗಳ ಸಮುದಾಯದ ಮಕ್ಕಳ ಶಿಕ್ಷಣ ಮತ್ತು ಹಾಸ್ಟೆಲ್‌ಗಳಿಗೆ ಸಾಕಷ್ಟು ಹಣ ಹಾಗೂ ಸವಲತ್ತುಗಳನ್ನು ನೀಡುತ್ತಿದ್ದರೂ ಶಿಕ್ಷಣದ ಗುಣಮಟ್ಟ ಹಾಗೂ ಫಲಿತಾಂಶ ಏಕೆ ಏರುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಂಗಳವಾರ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ADVERTISEMENT

‘ದಲಿತ, ಬುಡಕಟ್ಟು ವರ್ಗದ ಮಕ್ಕಳ ಶಿಕ್ಷಣದ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಏಕೆ ನಿಗಾ ವಹಿಸುತ್ತಿಲ್ಲ’ ಎಂದು ಪ್ರಶ್ನಿಸಿದ ಅವರು, ‘ಈ ವರ್ಗದ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ದರೆ ಸೇವೆಯಲ್ಲಿ ಇರಲು ನೀವು ಅನರ್ಹರು’ ಎಂದು ಅವರು ತರಾಟೆಗೆ ತೆಗೆದುಕೊಂಡರು.

‘ಹಾಸ್ಟೆಲ್‌ಗಳು ಮತ್ತು ಆಶ್ರಮ ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು. ನಿರಂತರವಾಗಿ ಗುಣಮಟ್ಟ ಹೆಚ್ಚಿಸಲು ಶ್ರಮಿಸಬೇಕು. ಹಾಸ್ಟೆಲ್‌ಗಳಿಗೆ ಸಂಜೆ ವೇಳೆ ಭೇಟಿ ನೀಡಿ, ಶುಚಿ ಕಿಟ್‌ಗಳು, ಆಹಾರ ಪದಾರ್ಥ ವಿತರಣೆ ಸಮರ್ಪಕವಾಗಿ ವಿತರಣೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು’ ಎಂದು ಸೂಚನೆ ನೀಡಿದರು.

‘ಕೆಲವು ಆಶ್ರಮ ಶಾಲೆಗಳಲ್ಲಿ ರಾತ್ರಿ ವೇಳೆ ಮಕ್ಕಳು ಇರುವುದಿಲ್ಲ. ಮಕ್ಕಳು ರಾತ್ರಿ ಊಟವಾದ ನಂತರ  ಮನೆಗೆ ಕರೆದುಕೊಂಡು ಹೋಗುತ್ತಾರೆ. ಚಿಕ್ಕ ಮಕ್ಕಳು ಎಂಬ ಕಾರಣಕ್ಕೆ ಮನೆಗೆ ಕರೆದುಕೊಂಡು ಹೋಗುತ್ತಾರೆ. ಎಲ್ಲ ಸೌಲಭ್ಯಗಳಿದ್ದೂ, ಯಾವ ಕಾರಣಕ್ಕೆ ಮನೆಗೆ ಕರೆದುಕೊಂಡು ಹೋಗುತ್ತಾರೆ. ಈ ಕುರಿತು ಪರಾಮರ್ಶೆ ನಡೆಸಿ ಪೋಷಕರಿಗೆ ಮನವರಿಕೆ ಮಾಡಬೇಕು’ ಎಂದು ಅವರು ನಿರ್ದೇಶನ ನೀಡಿದರು.

‘ಅನುದಾನ ಲಭ್ಯವಿದೆ ಎಂಬ ಕಾರಣಕ್ಕೆ ಬೇಡಿಕೆ ಇಲ್ಲದೆ ಇದ್ದರೂ, ಹಾಸಿಗೆ, ಬೆಡ್‌ಶೀಟ್‌ ಮತ್ತಿತರ ವಸ್ತುಗಳನ್ನು ಅನಗತ್ಯ ಖರೀದಿಸಿ ಗುಡ್ಡೆ ಹಾಕಿಕೊಳ್ಳುವುದನ್ನು ಸಹಿಸಲಾಗದು. ಅನಗತ್ಯವಾಗಿ 4 ಜಿ ವಿನಾಯಿತಿ ಪಡೆಯುವ ಬದಲು ನೇರವಾಗಿ ಟೆಂಡರ್‌ ಕರೆದು ಖರೀದಿ, ಸೇವೆಗಳನ್ನು ಪಡೆಯಬೇಕು’ ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು.

ಇಲಾಖೆಯ ಒಟ್ಟಾರೆ ಆಯವ್ಯಯದಲ್ಲಿ ಬಿಡುಗಡೆಯಾದ ₹1,884.01 ಕೋಟಿಯಲ್ಲಿ ₹1,879.35 ಕೋಟಿ ವೆಚ್ಚವಾಗಿದ್ದು, ಶೇ 99.75 ಸಾಧನೆಯಾಗಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ 389 ವಿದ್ಯಾರ್ಥಿ ನಿಲಯಗಳು, ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳು 39,541 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಒದಗಿಸಿದ್ದು, ₹194.71 ಕೋಟಿ ಒದಗಿಸಲಾಗಿದೆ ಎಂದು ಅವರು ಹೇಳಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಶೇ 77ರಷ್ಟು ಫಲಿತಾಂಶ ಬಂದಿದ್ದು, ಫಲಿತಾಂಶ ಉತ್ತಮಪಡಿಸಲು ಸೂಚನೆ ನೀಡಿದರು.

2,90,546 ವಿದ್ಯಾರ್ಥಿಗಳಿಗೆ ₹50.47 ಕೋಟಿ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿವೇತನ ಪಾವತಿ ಮಾಡಲಾಗಿದೆ. 2,48,887 ವಿದ್ಯಾರ್ಥಿಗಳಿಗೆ ₹302.64 ಕೋಟಿ ಮೊತ್ತವನ್ನು ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನ ಪಾವತಿ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

‘₹263 ಕೋಟಿ ಬಳಕೆಗೆ ಫಲಾನುಭವಿಗಳೇ ಇಲ್ಲ’

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣಕಾಸು ಇಲಾಖೆಯ ಸೂಚನೆಯಂತೆ 2023–24ರಲ್ಲಿ ಲಭ್ಯವಿದ್ದ ₹263 ಕೋಟಿಯನ್ನು ಖಜಾನೆಗೆ ಜಮೆ ಮಾಡಲಾಗಿದೆ. ಆದರೆ ಯಾವುದೇ ಯೋಜನೆ ಅಡಿ ಫಲಾನುಭವಿಗಳನ್ನು ಏಕೆ ಆಯ್ಕೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಶಾಸಕರು ಫಲಾನುಭವಿಗಳ ಪಟ್ಟಿ ನೀಡಿಲ್ಲ. ಆಯ್ಕೆ ಮಾಡಬೇಕಾದ ಫಲಾನುಭವಿಗಳ ಸಂಖ್ಯೆ ಅತ್ಯಂತ ಕಡಿಮೆ ಇರುವುದರಿಂದ ಸಂದಿಗ್ದ ಪರಿಸ್ಥಿತಿ ಎದುರಾಗುವ ಹಿನ್ನೆಲೆಯಲ್ಲಿ ಶಾಸಕರು ಆಯ್ಕೆ ಮಾಡಲು ಆಸಕ್ತಿ ತೋರಿಸುತ್ತಿಲ್ಲ ಎಂದು ವಿವರಿಸಿದರು.

ಫಲಾನುಭವಿಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. 22 ಪ್ರಕರಣಗಳಲ್ಲಿ ಸಿಂಧುತ್ವ ಪ್ರಮಾಣ ಪತ್ರ ಹಲವು ವರ್ಷಗಳಿಂದ ಇತ್ಯರ್ಥಕ್ಕೆ ಬಾಕಿ ಇದ್ದು ಇವುಗಳಲ್ಲಿ ಎಲ್ಲ ಪ್ರಕರಣಗಳನ್ನು ಸಿಆರ್‌ಇ ಸೆಲ್‌ಗೆ ಕಳುಹಿಸಬಾರದು. ಗೊಂದಲವಿದ್ದಲ್ಲಿ ಮಾತ್ರ ಕಳುಹಿಸುವಂತೆ ಸುತ್ತೋಲೆ ಹೊರಡಿಸುವಂತೆ ಸಿದ್ದರಾಮಯ್ಯ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.