ADVERTISEMENT

ದಾಬಸ್‌ಪೇಟೆ-ದೊಡ್ಡಬಳ್ಳಾಪುರ ನಡುವೆ 5,800 ಎಕರೆ ವಿಸ್ತಾರದ ‘ಕ್ವಿನ್‌ ಸಿಟಿ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 15:24 IST
Last Updated 26 ಸೆಪ್ಟೆಂಬರ್ 2024, 15:24 IST
ಮುಖ್ಯಮಂತ್ರಿ ಸಿದ್ದರಾಮಯ್ಯ ‘ಕ್ವಿನ್‌ ಸಿಟಿ’ ನಿರ್ಮಾಣಕ್ಕೆ ವಿಧಾನಸೌಧದಲ್ಲಿ ಗುರುವಾರ ಚಾಲನೆ ನೀಡಿದರು. ಸಚಿವರಾದ ಪ್ರಿಯಾಂಕ್‌ ಖರ್ಗೆ, ಎಂ.ಬಿ. ಪಾಟೀಲ, ಎಚ್‌.ಕೆ. ಪಾಟೀಲ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್‌.ವಿ. ದೇಶಪಾಂಡೆ, ಸಚಿವರಾದ ಜಮೀರ್‌ ಅಹಮದ್‌ ಖಾನ್, ಎಂ.ಸಿ. ಸುಧಾಕರ್, ಆರ್‌.ಬಿ. ತಿಮ್ಮಾಪೂರ ಭಾಗವಹಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ‘ಕ್ವಿನ್‌ ಸಿಟಿ’ ನಿರ್ಮಾಣಕ್ಕೆ ವಿಧಾನಸೌಧದಲ್ಲಿ ಗುರುವಾರ ಚಾಲನೆ ನೀಡಿದರು. ಸಚಿವರಾದ ಪ್ರಿಯಾಂಕ್‌ ಖರ್ಗೆ, ಎಂ.ಬಿ. ಪಾಟೀಲ, ಎಚ್‌.ಕೆ. ಪಾಟೀಲ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್‌.ವಿ. ದೇಶಪಾಂಡೆ, ಸಚಿವರಾದ ಜಮೀರ್‌ ಅಹಮದ್‌ ಖಾನ್, ಎಂ.ಸಿ. ಸುಧಾಕರ್, ಆರ್‌.ಬಿ. ತಿಮ್ಮಾಪೂರ ಭಾಗವಹಿಸಿದ್ದರು.   

ಬೆಂಗಳೂರು: ದಾಬಸ್‌ಪೇಟೆ-ದೊಡ್ಡಬಳ್ಳಾಪುರ ನಡುವೆ ಸ್ಯಾಟಲೈಟ್‌ ಟೌನ್‌ ವರ್ತುಲ ರಸ್ತೆಗೆ ಹೊಂದಿಕೊಂಡಂತೆ ನಿರ್ಮಾಣವಾಗಲಿರುವ ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರಕ್ಕೆ (ಕ್ವಿನ್‌ ಸಿಟಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು. 

5,800 ಎಕರೆ ವ್ಯಾಪ್ತಿಯಲ್ಲಿ ಈ ನಗರ ತಲೆ ಎತ್ತಲಿದ್ದು, ಮೊದಲ ಹಂತದಲ್ಲಿ ಎರಡು ಸಾವಿರ ಎಕರೆಯಲ್ಲಿ ಸಾಕಾರಗೊಳ್ಳಲಿದೆ. ಐದು ಲಕ್ಷ ಜನವಸತಿ ನೆಲೆಗೊಳಿಸುವ ಗುರಿಯೊಂದಿಗೆ ಆರಂಭವಾಗುತ್ತಿರುವ ಈ ಪ್ರದೇಶದಲ್ಲಿ ಶೇ 40ರಷ್ಟು ಜಾಗವನ್ನು ಉದ್ಯಾನಗಳಿಗೆ ಮೀಸಲಿಡಲಾಗುತ್ತಿದೆ.

465 ಎಕರೆಯಲ್ಲಿ 0.69 ಮೆಗಾವಾಟ್‌ ಸಾಮರ್ಥ್ಯದ ಸೌರವಿದ್ಯುತ್‌ ಘಟಕ ಸ್ಥಾಪನೆಯಾಗಲಿದೆ. 200 ಎಕರೆಯಲ್ಲಿ ವರ್ಷಕ್ಕೆ ಏಳು ಸಾವಿರ ಟನ್ ಹಣ್ಣು-ತರಕಾರಿ ಬೆಳೆಯಲಾಗುತ್ತದೆ. ಶೇಕಡ 50ರಿಂದ 70ರಷ್ಟು ಜಲ ಮರುಪೂರಣ ವ್ಯವಸ್ಥೆಯನ್ನು ನಗರ ಒಳಗೊಂಡಿರುತ್ತದೆ. ಒಟ್ಟು ₹40 ಸಾವಿರ ಕೋಟಿ ಹೂಡಿಕೆ ಮಾಡಲಾಗುತ್ತಿದೆ.

ADVERTISEMENT
‘ಕ್ವಿನ್‌ ಸಿಟಿ’ಯ ಮಾದರಿ.
‘ಕ್ವಿನ್‌ ಸಿಟಿ’ ಭಾರತದ ಪಾಲಿಗೆ ಹೊಸ ಭಾಷ್ಯ ಬರೆಯಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು ಸುಸ್ಥಿರ ಬೆಳವಣಿಗೆ ಸಾಧಿಸಲಾಗುತ್ತದೆ
ಸಿದ್ದರಾಮಯ್ಯ ಮುಖ್ಯಮಂತ್ರಿ
ಯೋಜನೆಗೆ ₹40 ಸಾವಿರ ಕೋಟಿ ಹೂಡಿಕೆ ಮಾಡುವ ಜತೆಗೆ ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನೂ ಹೊಂದಲಾಗಿದೆ
ಎಂ.ಬಿ. ಪಾಟೀಲ. ಕೈಗಾರಿಕಾ ಸಚಿವ

ಹೀಗಿರಲಿದೆ ‘ಕ್ವಿನ್‌ ಸಿಟಿ’ 

‘ಕ್ವಿನ್‌ ಸಿಟಿ’ ಎಂದರೆ  ಜ್ಞಾನ ಆರೋಗ್ಯ ನಾವೀನ್ಯ ಮತ್ತು ಸಂಶೋಧನೆ ನಡುವಣ ಸಮನ್ವಯ. ಆರ್ಥಿಕ ಬೆಳವಣಿಗೆ ಉತ್ತೇಜಿಸುವುದರ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಮುನ್ನಡೆಸುವುದು. ಅತ್ಯಾಧುನಿಕ ತಂತ್ರಜ್ಞಾನ ಸಂಯೋಜಿಸುವ ಮೂಲಕ ಪರಿಸರ ಸ್ನೇಹಿ ಮೂಲಸೌಲಭ್ಯಗಳ ನೆರವಿನಿಂದ ಸುಸ್ಥಿರ ಜೀವನಶೈಲಿ ಒದಗಿಸುವುದು. ಭವಿಷ್ಯದ ಅಗತ್ಯಗಳನ್ನು ಪೂರೈಸಲು ವಿಶೇಷ ವಿನ್ಯಾಸ ಮಾಡಿರುವ ಈ ನಗರದ ನೀಲನಕ್ಷೆಯನ್ನು ‘ಸ್ಮಾರ್ಟ್‌ ಲಿವಿಂಗ್‌’ ಪರಿಕಲ್ಪನೆಗೆ ಅನುಗುಣವಾಗಿ ರೂಪಿಸಲಾಗಿದೆ. ಜ್ಞಾನ ವಲಯ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಒಳಗೊಂಡ ಪ್ರಧಾನ ಶಿಕ್ಷಣ ಕೇಂದ್ರ ಸ್ಥಾಪಿಸಲಾಗುತ್ತದೆ. ವಿಶ್ವವಿದ್ಯಾಲಯ ಅನುದಾನ ಆಯೋಗದ ನಿಯಮಾವಳಿಗಳ ಆಧಾರದಲ್ಲಿ  ಕ್ಯಾಂಪಸ್‌ಗಳನ್ನು ನಿರ್ವಹಿಸಲು 500 ಉನ್ನತ ವಿದೇಶಿ ಶಿಕ್ಷಣ ಸಂಸ್ಥೆಗಳನ್ನು ಆಕರ್ಷಿಸಲಾಗುತ್ತದೆ.  

ಆರೋಗ್ಯ ವಲಯ ಜೀವ ವಿಜ್ಞಾನದ (ಲೈಫ್‌ ಸೈನ್ಸಸ್‌) ಪಾರ್ಕ್‌ ಒಳಗೊಂಡಿರುತ್ತದೆ. ಏಷ್ಯಾದ ಪ್ರಮುಖ ಶೈಕ್ಷಣಿಕ ವೈದ್ಯಕೀಯ ಕೇಂದ್ರವಾಗಲಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯಮಟ್ಟದ ಆಸ್ಪತ್ರೆಗಳು ನೆಲೆಗೊಳ್ಳಲಿವೆ.   ನಾವೀನ್ಯತಾ ವಲಯ ಜೀವ ವಿಜ್ಞಾನ ಭವಿಷ್ಯದ ಸಂಚಾರ ಸೆಮಿಕಂಡಕ್ಟರ್‌ ಸುಧಾರಿತ ಪರಿಕರ ಆಧುನಿಕ ತಯಾರಿಕೆ ವೈಮಾಂತರಿಕ್ಷ ಮತ್ತು ರಕ್ಷಣೆ ಬಾಹ್ಯಾಕಾಶ ತಂತ್ರಜ್ಞಾನದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮ ವಲಯಗಳ ನೆಲೆಯಾಗುತ್ತದೆ.  ಸಂಶೋಧನಾ ವಲಯ ಜೈವಿಕ ಔಷಧ ಮತ್ತು ವೈಜ್ಞಾನಿಕ ಸಂಶೋಧನೆ ಅಗತ್ಯವಾದ ಪ್ರಯೋಗ ಕೇಂದ್ರಗಳು ಮತ್ತು ಸಂಶೋಧನಾ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತದೆ. ಜಾಗತಿಕ ಜ್ಞಾನ ಆಧಾರಿತ ಆರ್ಥಿಕತೆ ಸಂಶೋಧನೆಗಳಿಗೆ ಒತ್ತು ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.