ಬೆಂಗಳೂರು: ‘ಅನ್ನಭಾಗ್ಯ’ ಎಂದು ಜನರ ಅನ್ನ ಕಸಿದುಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದ ಜನರ ಜೀವನ ನರಕ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಅವರ ಜತೆ ಜಯನಗರದ ಅರಸು ಕಾಲೊನಿಯಲ್ಲಿ ಬಿಪಿಎಲ್ ಪಡಿತರ ಚೀಟಿ ರದ್ದಾಗಿರುವ ಕುಟುಂಬದವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
‘ಕೊಳೆಗೇರಿಗಳಲ್ಲಿ ವಾಸಿಸಲು ಆಗದ ಜಾಗದಲ್ಲಿ ಏಳು ಜನ ವಾಸವಾಗಿದ್ದಾರೆ. ಅಂತಹವರ ಬಿಪಿಎಲ್ ಪಡಿತರ ಚೀಟಿ ರದ್ದಾಗಿದೆ. ಅವರು ತೆರಿಗೆ ಕಟ್ಟುವವರು ಅಂತ ಹೇಳುತ್ತಾರೆ. ಅವರೆಲ್ಲ ತೆರಿಗೆ ಕಟ್ಟುತ್ತಾರಾ’ ಎಂದು ಪ್ರಶ್ನಿಸಿದರು.
ಬಿಪಿಎಲ್ ಪಡಿತರ ಚೀಟಿ ರದ್ದಾದರೆ ಕೇವಲ ಅಕ್ಕಿ ಮಾತ್ರ ರದ್ದಾಗುವುದಿಲ್ಲ. ಔಷಧಿ, ಆಸ್ಪತ್ರೆ ಮತ್ತಿತರ ಸೌಲಭ್ಯಗಳೂ ಸ್ಥಗಿತವಾಗುತ್ತವೆ. ಜನರ ಕಷ್ಟ ಅವರಿಗೆ ಅರ್ಥ ಆಗುತ್ತಿಲ್ಲ. ಬಿಪಿಎಲ್ ಪಡಿತರ ಚೀಟಿ ಪಡೆಯಲು ಮತ್ತೆ ಅರ್ಜಿ ಹಾಕಬೇಕಂತೆ. ಇದು ಜನ ವಿರೋಧಿ ಮತ್ತು ಯೂಟರ್ನ್ ಸರ್ಕಾರ ಎಂದು ಟೀಕಿಸಿದರು.
ಇಲ್ಲಷ್ಟೇ ಏಕೆ ರದ್ದು?: ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರ ಕಾರ್ಡ್ ರದ್ದು ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ 80 ಕೋಟಿ ಜನರಿಗೆ ಅನ್ನ ಕೊಡುತ್ತಿದೆ. ಬೇರೆ ಯಾವ ರಾಜ್ಯಗಳಲ್ಲಿ ಪಡಿತರ ಚೀಟಿ ರದ್ದಾಗಿದೆ? ಕೇವಲ ಕರ್ನಾಟಕದಲ್ಲಿ ಮಾತ್ರ ಯಾಕೆ ರದ್ದಾಗಿದೆ ಎಂದೂ ಬೊಮ್ಮಾಯಿ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.