ಬೆಂಗಳೂರು: ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಕೊಡಗಿನ ಮೂಲದ ರೋಹನ್ ಬೋಪಣ್ಣ ಅವರನ್ನು ಭೇಟಿಯಾಗಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ₹50 ಲಕ್ಷ ಬಹುಮಾನ ಘೋಷಿಸಿದ್ದಾರೆ.
ರೋಹನ್ ಬೋಪಣ್ಣ ಅವರಿಗೆ ಕುಟುಂಬದ ಸಮ್ಮುಖದಲ್ಲಿ ಸಿದ್ದರಾಮಯ್ಯ ಅವರು ಸನ್ಮಾನ ಮಾಡಿದರು. ಈ ವೇಳೆ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ, ‘ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ರೋಹನ್ ಬೋಪಣ್ಣ ಅವರನ್ನು ಭೇಟಿಯಾಗಿ ಅಭಿನಂದಿಸಿ, ₹50 ಲಕ್ಷ ಬಹುಮಾನ ಘೋಷಿಸಿದೆ’ ಎಂದು ಬರೆದುಕೊಂಡಿದ್ದಾರೆ.
ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಜ.27ರಂದು ನಡೆದಿದ್ದ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಫೈನಲ್ ಪಂದ್ಯದಲ್ಲಿ ಸಿಮೋನ್ ಬೊಲೆಲಿ ಮತ್ತು ಆ್ಯಂಡ್ರಿಯಾ ವಾವಸೋರಿ ಜೋಡಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದರು. ಒಂದು ಗಂಟೆ, ಮೂವತ್ತೊಂಬತ್ತು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಬೋಪಣ್ಣ–ಎಬ್ಡೆನ್ ಜೋಡಿ 7–6 (0), 7–5 ರಿಂದ ಇಟಲಿಯ ಸಿಮೋನ್ ಬೊಲೆಲಿ ಮತ್ತು ಆ್ಯಂಡ್ರಿಯಾ ವಾವಸೋರಿ ಜೋಡಿಯನ್ನು ಮಣಿಸಿದ್ದರು.
ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೂರನೇ ಆಟಗಾರನೆಂಬ ಹೆಗ್ಗಳಿಕೆಗೂ ರೋಹನ್ ಪಾತ್ರರಾಗಿದ್ದಾರೆ. ಈ ಹಿಂದೆ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಪ್ರಶಸ್ತಿ ಗೆದ್ದಿದ್ದರು. ಮಹಿಳೆಯರ ವಿಭಾಗದಲ್ಲಿ ಸಾನಿಯಾ ಮಿರ್ಜಾ ಜಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.