ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಬಂದ ಹಣದಲ್ಲಿ ಗ್ರಾಮಸ್ಥರಿಗೆ ಹೋಳಿಗೆ ಊಟ ಹಾಕಿದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಸುಟ್ಟಟ್ಟಿಯ ವೃದ್ಧೆ ಅಕ್ಕಾತಾಯಿ ಲಂಗೂಟಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿ ಸನ್ಮಾನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಗೃಹಲಕ್ಷ್ಮಿ ಹಣದಲ್ಲಿ ಇಡೀ ಗ್ರಾಮಕ್ಕೆ ಹೋಳಿಗೆ ಊಟ ಹಾಕಿದ ಅಕ್ಕಾತಾಯಿ ಲಂಗೂಟಿ ಅವರನ್ನು ಬೆಳಗಾವಿ ನಿಲ್ದಾಣದಲ್ಲಿ ಭೇಟಿಯಾಗಿ, ಸನ್ಮಾನಿಸಿದೆ. ಕಾಂಗ್ರೆಸ್ ಸರ್ಕಾರ ಇರುವವರೆಗೂ ಗೃಹಲಕ್ಷ್ಮಿ ಯೋಜನೆ ನಿಲ್ಲುವುದಿಲ್ಲ. ಪ್ರತಿ ತಿಂಗಳು ನಿಮ್ಮ ಮಡಿಲು ಸೇರುತ್ತಿರುತ್ತದೆ ಎಂಬ ವಾಗ್ದಾನ ನೀಡಿದೆ’ ಎಂದು ಬರೆದುಕೊಂಡಿದ್ದಾರೆ.
‘ನಾಡಿಗೆ ಅನ್ನ ಕೊಡೋ ದೊರೆ ನಿನ್ನ ಕೈ ಮೇಲಾಗ್ಲಿ, ನಾಡ ಆಳುವ ದೊರೆ ನೀನು ದೇಶ ಆಳಬೇಕು. ಹಿಂಗಾ ಆಳುತ್ತಾ ಹೋಗ್ತಾ ಇರಬೇಕು. ನಾಡಿಗೆ ಒಳ್ಳೇದಾಗೈತ್ರಿ ಎಂದು ಅಕ್ಕಾತಾಯಿ ಲಂಗೂಟಿ ಅವರು ಮನಸ್ಫೂರ್ತಿಯಾಗಿ ಆಶೀರ್ವಾದ ಮಾಡಿದರು’ ಎಂದು ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಅಕ್ಕಾತಾಯಿ ಲಂಗೂಟಿ ಅವರಿಗೆ ಮತ್ತು ಅವರ ಜೊತೆಯಿದ್ದ ತಾಯಂದಿರಿಗೆ ಸೀರೆ, ಅರಶಿನ –ಕುಂಕುಮ ಬಾಗಿನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.