ಬೆಂಗಳೂರು: ‘ಹಲವು ನಕ್ಸಲ್ ಪ್ರಕರಣಗಳಲ್ಲಿ ವಿಕ್ರಂ ಗೌಡ ಪೊಲೀಸರಿಗೆ ಬೇಕಾದವನಾಗಿದ್ದ. ನಕ್ಸಲ್ ಚಟುವಟಿಕೆ ನಿಗ್ರಹಿಸಲು ಆತನನ್ನು ಎನ್‌ಕೌಂಟರ್ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಕ್ರಂ ಗೌಡ ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿರಬಹುದು ಎಂದು ಪ್ರಗತಿಪರ ಚಿಂತಕರು ಅನುಮಾನ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಶರಣಾಗುವಂತೆ ವಿಕ್ರಂ ಗೌಡನಿಗೆ ಆದೇಶ ನೀಡಲಾಗಿತ್ತು. ಆದರೆ, ಶರಣಾಗಿರಲಿಲ್ಲ’ ಎಂದರು.
‘ವಿಕ್ರಂ ಗೌಡನನ್ನು ಹಿಡಿದವರಿಗೆ ಕೇರಳ ಸರ್ಕಾರ ₹25 ಲಕ್ಷ, ಕರ್ನಾಟಕ ಸರ್ಕಾರ 5 ಲಕ್ಷ ಬಹುಮಾನ ಘೋಷಿಸಿತ್ತು’ ಎಂದರು.
‘ಅವನೇ ದಾಳಿ ಮಾಡುತ್ತಿದ್ದ’
‘ನಕ್ಸಲ್ ವಿಕ್ರಂ ಗೌಡ ಅಪಾಯಕಾರಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ. ಪೊಲೀಸರು ಎನ್‌ಕೌಂಟರ್ ಮಾಡದೇ ಇರುತ್ತಿದ್ದರೆ, ಅವನೇ ದಾಳಿ ನಡೆಸುತ್ತಿದ್ದ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವಿಕ್ರಂ ಗೌಡನ ಮೇಲೆ ಕೊಲೆ ಸೇರಿದಂತೆ 60ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಿವೆ. ಆತ ಸ್ವಯಂಚಾಲಿತ ಮಷಿನ್ ಗನ್ ಇಟ್ಟುಕೊಂಡಿದ್ದ’ ಎಂದರು.
‘ಈ ಹಿಂದೆ ಆತನ ಶರಣಾಗತಿಗಾಗಿ ಪ್ರಯತ್ನಗಳು ನಡೆದಿದ್ದವು. ಅವನ ಸಂಬಂಧಿಕರು ಕೂಡಾ ಶರಣಾಗುವಂತೆ ಹೇಳಿದ್ದರು.
ಆದರೆ, ವಿಕ್ರಂ ಗೌಡ ಒಪ್ಪಿರಲಿಲ್ಲ’ ಎಂದು ಹೇಳಿದರು. ‘ನಕ್ಸಲ್ ವಿಚಾರದಲ್ಲಿ ಪಕ್ಷದ ಪ್ರಶ್ನೆ ಬರುವುದಿಲ್ಲ. ಜನರ ಸುರಕ್ಷತೆ ಮುಖ್ಯ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.