ಬೆಂಗಳೂರು: ಕಳಸಾ– ಬಂಡೂರಿ ನಾಲಾ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಶೀಘ್ರವೇ ಒಪ್ಪಿಗೆ ಕೊಡಿಸಲು ಮಧ್ಯ ಪ್ರವೇಶಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, ‘ಅಂತರರಾಜ್ಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೇಂದ್ರ ಸರ್ಕಾರದ ಪಾತ್ರ ಮಹತ್ವದ್ದಾಗಿದೆ. ಅದರಲ್ಲೂ ರಾಷ್ಟ್ರೀಯ ಮಹತ್ವದ ಕುಡಿಯುವ ನೀರಿನ ಮತ್ತು ವಿದ್ಯುತ್ ಯೋಜನೆಗಳು ಸಕಾಲದಲ್ಲಿ ಪೂರ್ಣಗೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ. ಇದಕ್ಕಾಗಿ ತ್ವರಿತಗತಿಯಲ್ಲಿ ಯೋಜನೆಗಳಿಗೆ ಅನುಮತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಂತರರಾಜ್ಯ ಸಹಕಾರ ಅತಿ ಮುಖ್ಯ’ ಎಂದು ಅವರು ತಿಳಿಸಿದ್ದಾರೆ.
‘ಆದರೆ, ನಮ್ಮ ಕುಡಿಯುವ ನೀರಿನ ಯೋಜನೆ ಬಗ್ಗೆ ಗೋವಾ ರಾಜ್ಯ ಸುಪ್ರೀಂಕೋರ್ಟ್‌ನಲ್ಲಿ ತಕರಾರು ಎತ್ತಿದೆ. ನಮ್ಮ ಯೋಜನೆ ಅತ್ಯಂತ ಹಳೆಯ ಮತ್ತು ನ್ಯಾಯ ಸಮ್ಮತ ಯೋಜನೆಯಾಗಿದ್ದು, ವನ್ಯಜೀವಿಗಳಿಗೆ ಹೆಚ್ಚಿನ ಹಾನಿ ಮಾಡುವುದಿಲ್ಲ. ಒಂದು ವೇಳೆ ಗೋವಾ ರಾಜ್ಯ ಇದೇ ಧೋರಣೆ ಮುಂದುವರಿಸಿದರೆ ಗೋವಾ– ತಾಮ್ನಾರ್ ವಿದ್ಯುತ್ ಪ್ರಸರಣ ಮಾರ್ಗದ ಯೋಜನೆಗೆ ಕರ್ನಾಟಕ ನೀಡಿದ್ದ ಅನುಮತಿಯನ್ನು ಪುನರ್ ಪರಿಶೀಲಿಸಬೇಕಾಗುತ್ತದೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
‘ಗೋವಾದ ವಿದ್ಯುತ್ ಪ್ರಸರಣ ಮಾರ್ಗದ ಯೋಜನೆ ವಿಚಾರವಾಗಿ ಕೇಂದ್ರ ಉನ್ನತಾಧಿಕಾರ ಸಮಿತಿ 2021 ರಲ್ಲಿ ವರದಿಯೊಂದನ್ನು ನೀಡಿದ್ದು, ಅದರ ಪ್ರಕಾರ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಧಕ್ಕೆ ಉಂಟು ಮಾಡುವುದರಿಂದ ಮಾರ್ಗವನ್ನೇ ಪುನರ್‌ರಚಿಸಬೇಕು ಎಂದು ಸೂಚಿಸಿತ್ತು. ಈ ವರದಿಯ ಶಿಫಾರಸಿಗೆ ಸುಪ್ರೀಂಕೋರ್ಟ್ 2022 ರಲ್ಲಿ ತನ್ನ ಒಪ್ಪಿಗೆ ನೀಡಿತ್ತು. ಕೇಂದ್ರ ವಿದ್ಯುತ್ ಸಚಿವರು 2024 ರ ಆಗಸ್ಟ್‌ನಲ್ಲಿ ಪತ್ರ ಬರೆದು 72,817 ಮರಗಳ ಬದಲಿಗೆ 13,954 ಮರಗಳನ್ನು ಮಾತ್ರ ಕತ್ತರಿಸುತ್ತೇವೆ ಎಂದು ತಿಳಿಸಿದ್ದರು. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಮರಗಳ ಹನನ ವಾದರೂ, ಆನೆಗಳು ಹಾದು ಹೋಗುವ ಕಾರಿಡಾರ್ ಆಗಿದ್ದರೂ ರಾಷ್ಟ್ರದ ಅಭಿವೃದ್ಧಿ ಹಿತದೃಷ್ಟಿಯಿಂದ ನಾವು ವಿದ್ಯುತ್ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದೆವು’ ಎಂದಿದ್ದಾರೆ.
‘ಅಚ್ಚರಿ ಎಂದರೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಗೋವಾದ ಯೋಜನೆಗೆ ಒಪ್ಪಿಗೆ ನೀಡಿ, ನಮ್ಮ ಯೋಜನೆಯ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳದೇ ನ್ಯಾಯಾಂಗ ನಿಂದನೆಯ ನೆಪವೊಡ್ಡಿ ಮುಂದೂಡಿದೆ. ಇದು ಕರ್ನಾಟಕಕ್ಕೆ ಆಗಿರುವ ಅನ್ಯಾಯ. ನಮ್ಮ ನ್ಯಾಯೋಚಿತ ಕುಡಿಯುವ ನೀರಿನ ಯೋಜನೆಗೆ ಗೋವಾ ತಡೆ ಒಡ್ಡಿದೆ. ಆದ್ದರಿಂದ ಬೇರೆ ದಾರಿ ಇಲ್ಲದೇ ನಮ್ಮ ನಿರ್ಣಯ ಪುನರ್‌ಪರಿಶೀಲಿಸಬೇಕಾಗಿದೆ’ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.