ADVERTISEMENT

ಪೂರ್ಣ ಚರ್ಚೆ ಆಗದ ಕಾರಣ ಕನ್ನಡಿಗರಿಗೆ ಮೀಸಲಾತಿ ಮಸೂದೆಗೆ ತಡೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 21:35 IST
Last Updated 18 ಜುಲೈ 2024, 21:35 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಖಾಸಗಿ ಕಂಪನಿಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಚರ್ಚೆ ಮಾಡದಿರುವ ಕಾರಣ ಮಸೂದೆಗೆ ತಡೆ ನೀಡಲಾಯಿತು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಜಾಯಿಷಿ ನೀಡಿದರು.

ADVERTISEMENT

ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ಆರ್‌.ಅಶೋಕ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ‘ಕೆಲವು ಗೊಂದಲಗಳು ಇವೆ. ಪೂರ್ಣ ಪ್ರಮಾಣದಲ್ಲಿ ಚರ್ಚೆ ಆಗಬೇಕಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಗೊಂದಲಗಳನ್ನು ನಿವಾರಣೆ ಮಾಡಿ, ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.

‘ಇದು ತುಘಲಕ್‌ ಆಡಳಿತ ಅಲ್ಲ, ಸಿದ್ದರಾಮಯ್ಯನ ಆಡಳಿತ’ ಎಂದು ಅವರು ಅಶೋಕಗೆ ತಿರುಗೇಟು ನೀಡಿದರು.

ಅಶೋಕ ಅವರು ‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿ ವಿಷಯ ಪ್ರಸ್ತಾಪಿಸಿದರು. ‘ಖಾಸಗಿ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಸಂಬಂಧ ಸಿದ್ದರಾಮಣ್ಣ ‘ಎಕ್ಸ್‌’ ಮೂಲಕ ಮೂರು ಬಾರಿ ಪೋಸ್ಟ್‌ ಮಾಡಿದ್ದಾರೆ. ಮೊದಲು ಶೇ 100 ಮೀಸಲಾತಿ ಎಂದು ಪೋಸ್ಟ್‌ ಮಾಡಿದರು. ಅದನ್ನು ಅಳಸಿ ಹಾಕಿ ಮತ್ತೊಂದು ಪೋಸ್ಟ್‌ ಮಾಡಿ ಶೇ 70, ಶೇ50 ಮೀಸಲಾತಿ ನೀಡುತ್ತೇವೆ ಎಂದರು. ಕೊನೆಗೆ ಆ ಪೋಸ್ಟ್‌ ಹಿಂದಕ್ಕೆ ಪಡೆದು ಮಸೂದೆಗೆ ತಡೆ ನೀಡಿದರು’ ಎಂದರು.

‘ಮುಖ್ಯಮಂತ್ರಿಯವರಲ್ಲೇ ಸ್ಪಷ್ಟತೆ ಇಲ್ಲ. ಇಂತಹ ಬೆಳವಣಿಗೆ ಒಳ್ಳೆಯದ್ದಲ್ಲ. ತುಘಲಕ್ ದರ್ಬಾರ್‌ ಆಗಿದೆ. ಕನ್ನಡಿಗರಿಗೆ ಸ್ಪಷ್ಟ ಸಂದೇಶ ನೀಡಿ’ ಎಂದು ಅಶೋಕ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.