ಬೆಂಗಳೂರು: ‘ವಾಸ್ತು ಸರಿ ಇಲ್ಲ’ ಎಂಬ ಕಾರಣಕ್ಕೆ ಐದು ವರ್ಷಗಳಿಂದ ಮುಚ್ಚಲಾಗಿದ್ದ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯ ದಕ್ಷಿಣ ದ್ವಾರವನ್ನು ಶನಿವಾರ ತೆರೆಸಿ, ಅದರ ಮೂಲಕವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿಯ ಒಳಗೆ ಪ್ರವೇಶಿಸಿದರು.
ಅನ್ನಭಾಗ್ಯ ಯೋಜನೆ ಅನುಷ್ಠಾನ ಕುರಿತಂತೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲು ವಿಧಾನಸೌಧಕ್ಕೆ ಬಂದಿದ್ದ ಮುಖ್ಯಮಂತ್ರಿ, ತಮ್ಮ ಕಚೇರಿಯ ದಕ್ಷಿಣ ದ್ವಾರ ಮುಚ್ಚಿರುವುದನ್ನು ಗಮನಿಸಿದರು. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ‘ವಾಸ್ತು ಕಾರಣಕ್ಕೆ ಆ ದ್ವಾರವನ್ನು ಬಂದ್ ಮಾಡಲಾಗಿದೆ’ ಎಂದು ಉತ್ತರ ಬಂತು.
ಆ ದ್ವಾರದಲ್ಲಿ ನಿಂತ ಮುಖ್ಯಮಂತ್ರಿ, ಕಚೇರಿಯ ಪಶ್ಚಿಮ ದ್ವಾರದ ಮೂಲಕ ಸಿಬ್ಬಂದಿಯನ್ನು ಒಳಗೆ ಕಳುಹಿಸಿ ದಕ್ಷಿಣ ದ್ವಾರವನ್ನು ತೆರೆಸಿದರು. ಬಳಿಕ ಅದೇ ದ್ವಾರದ ಮೂಲಕ ಅವರು ಒಳಗೆ ತೆರಳಿದರು. ಅಲ್ಲಿಯೇ ಸಭೆಯನ್ನೂ ನಡೆಸಿದರು.
‘ಆರೋಗ್ಯಕರ ಮನಸ್ಸು, ಸ್ವಚ್ಚ ಹೃದಯ, ಜನಪರ ಕಾಳಜಿ, ಒಳ್ಳೆಯ ಗಾಳಿ, ಬೆಳಕು ಬರುವಂತಿದ್ದರೆ ಅದೇ ಉತ್ತಮ ವಾಸ್ತು’ ಎಂದು ಅಧಿಕಾರಿಗಳ ಜತೆ ಮುಖ್ಯಮಂತ್ರಿ ತಮ್ಮ ನಿಲುವು ಹಂಚಿಕೊಂಡರು.
ಸಭೆ ಮುಗಿದ ಬಳಿಕವೂ ದಕ್ಷಿಣ ದ್ವಾರದ ಮೂಲಕವೇ ಮುಖ್ಯಮಂತ್ರಿ ಹೊರಗೆ ಬಂದರು.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ‘ಜನರ ಬಗ್ಗೆ ಕಾಳಜಿ, ನಡತೆಯಲ್ಲಿ ಪ್ರಾಮಾಣಿಕತೆ, ಕರ್ತವ್ಯದಲ್ಲಿ ನಿಷ್ಠೆ ನಮ್ಮೊಳಗಿದ್ದರೆ ದಿಕ್ಕು, ಘಳಿಗೆ, ಮುಹೂರ್ತ ಎಲ್ಲವೂ ನಗಣ್ಯ. ವಾಸ್ತುದೋಷದ ಕಾರಣಕ್ಕೆ ಐದು ವರ್ಷಗಳಿಂದ ಮುಚ್ಚಲಾಗಿದ್ದ ವಿಧಾನಸೌಧದ ಮುಖ್ಯಮಂತ್ರಿಯ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ, ಅದೇ ಬಾಗಿಲಿನಿಂದ ಕಚೇರಿ ಪ್ರವೇಶಿಸಿದೆ. ಕೊಠಡಿಯೊಳಗೆ ಒಳ್ಳೆಯ ಗಾಳಿ, ಬೆಳಕು ಬರುವಂತಿದ್ದರೆ ಅದಕ್ಕಿಂತ ಉತ್ತಮ ವಾಸ್ತು ಬೇರೆ ಇಲ್ಲ. ನಡೆ - ನುಡಿ ಶುದ್ಧವಿದ್ದರೆ ಮತ್ತೆಲ್ಲವೂ ಶುಭದಾಯಕ ಆಗಿರಲಿದೆ. ಜನತೆಯ ಆಶೀರ್ವಾದ ಇರಲಿ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.