ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಚಿತ್ರರಂಗದ ವರನಟ ಡಾ.ರಾಜ್ಕುಮಾರ್ ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ.
ಡಾ. ರಾಜ್ಕುಮಾರ್ ಅಕಾಡೆಮಿ ವತಿಯಿಂದ ನಗರದ ಜ್ಞಾನಜ್ಯೋತಿ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಯುಪಿಎಸ್ಸಿ-2022 ಸಾಧಕರಿಗೆ ಸನ್ಮಾನ’ ಸಮಾರಂಭದಲ್ಲಿ ಸಾಧಕರನ್ನು ಅಭಿನಂದಿಸಿ ಅವರು ಮಾತನಾಡಿದ್ದಾರೆ.
ಡಾ. ರಾಜ್ಕುಮಾರ್ ಅಕಾಡೆಮಿ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ನಾನು ರಾಜ್ಕುಮಾರ್ ಅವರನ್ನು ಭೇಟಿ ಮಾಡಲು ಹೋದಾಗಲೆಲ್ಲ, ‘ಬನ್ನಿ, ಬನ್ನಿ ನಮ್ ಕಾಡಿನವರು’ ಎಂದು ಖುಷಿಯಿಂದ ಕರೆಯುತ್ತಿದ್ದರು. ಡಾ.ರಾಜ್ ಕುಮಾರ್ ಅವರದ್ದು ಅತ್ಯಂತ ಸರಳ ವ್ಯಕ್ತಿತ್ವ. ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುವ ಮೇರು ಸಂಸ್ಕಾರದ ರಾಯಭಾರಿ ಆಗಿದ್ದವರು. ಡಾ.ರಾಜ್ ಅವರ ಬದುಕಿನಿಂದ ನಾವು ಕಲಿಯಬೇಕಾದ್ದು, ರೂಢಿಸಿಕೊಳ್ಳಬೇಕಾದ್ದು ತುಂಬಾ ಇದೆ’ ಎಂದು ಕೊಂಡಾಡಿದ್ದಾರೆ.
‘ಜಾತಿ ತಾರತಮ್ಯದ ಕಾರಣದಿಂದ ಶಿಕ್ಷಣದಿಂದ ವಂಚಿತರಾದವರು ಬಹಳಷ್ಟು ಜನರಿದ್ದಾರೆ. ಅವರಿಗೆ ಶಿಕ್ಷಣದ ಜೊತೆಗೆ ಬದುಕಿನ ಅವಕಾಶಗಳೂ ದೊರಕುವುದಿಲ್ಲ. ಯುಪಿಎಸ್ಸಿ ನಲ್ಲಿ ತೇರ್ಗಡೆ ಹೊಂದಿದವರು ಈ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯನ್ನು ಅಳಿಸುವ ಮೂಲಕ ದೇಶದ ಮತ್ತು ಸಮಾಜದ ಪ್ರಗತಿಗೆ ಶ್ರಮಿಸಬೇಕು’ ಎಂದು ಕರೆ ನೀಡಿದ್ದಾರೆ.
‘ಡಾ.ರಾಜ್ಕುಮಾರ್ ಅಕಾಡೆಮಿ ಅಪಾರ ಯಶಸ್ಸು ಗಳಿಸಲು ರಾಘವೇಂದ್ರ ರಾಜ್ಕುಮಾರ್ ಮತ್ತು ಅಕಾಡೆಮಿ ಸಿಬ್ಬಂದಿಯ ಕೊಡುಗೆ ಅಪಾರ. ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆದು ದೇಶ ಸೇವೆಯ ಕನಸು ಕಟ್ಟಿಕೊಂಡಿರುವ ಅಸಂಖ್ಯ ಮನಸುಗಳಿಗೆ ಆಸರೆಯಾಗಲಿ ಎಂದು ಹಾರೈಸುತ್ತೇನೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.