ಬೆಂಗಳೂರು: ‘ಉಪ ಚುನಾವಣೆ ಕಾಂಗ್ರೆಸ್ ಪಕ್ಷದ ಸತ್ಯ ಮತ್ತು ಬಿಜೆಪಿ- ಜೆಡಿಸ್ ಪಕ್ಷಗಳ ಸುಳ್ಳುಗಳ ನಡುವಿನ ಚುನಾವಣೆಯಾಗಿತ್ತು. ಸತ್ಯ ಗೆದ್ದಿದೆ. ಪ್ರತಿಪಕ್ಷಗಳ ಅಪಪ್ರಚಾರ, ಸುಳ್ಳು ಆರೋಪಗಳನ್ನು ಮೆಟ್ಟಿನಿಂತು ನಾವು ಸಾಧಿಸಿರುವುದು ದಿಗ್ವಿಜಯವಾಗಿ ಕಾಣುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ಲೇಷಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾನು ದಂತಗೋಪುರದಲ್ಲಿ ಕುಳಿತವನಲ್ಲ. ಜನರ ಜೊತೆ ನಿರಂತರ ಒಡನಾಟ ಉಳ್ಳವನು. ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ– ಜೆಡಿಎಸ್‌ನವರು ಪ್ರಧಾನಿ ಕೂಡಾ ಸುಳ್ಳು ಹೇಳಿದರು. ಮಹಾರಾಷ್ಟ್ರದಲ್ಲಿ ಸುಳ್ಳು ಜಾಹೀರಾತು ನೀಡಿದ್ದರು. ಅವೆಲ್ಲದಕ್ಕೂ ಜನ ಉತ್ತರ ಕೊಟ್ಟಿದ್ದಾರೆ’ ಎಂದರು.
‘ರಾಜಭವನದಿಂದ ಹಿಡಿದು ಕೇಂದ್ರ ತನಿಖಾ ಸಂಸ್ಥೆಗಳವರೆಗೆ ದುರ್ಬಳಕೆ ಮಾಡಿ ನನ್ನ, ನನ್ನ ಕುಟುಂಬ ಹಣಿಯಲು ಯತ್ನಿಸಿದ್ದಾರೆ. ನನ್ನನ್ನು ಕಟ್ಟಿ ಹಾಕಲು ಬಿಜೆಪಿಯವರು ನನ್ನ ಮತ್ತು ಪತ್ನಿಯ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಇದನ್ನು ಯಾರೂ ನಂಬಿಲ್ಲ. ಅದಕ್ಕೆ ಈ ಫಲಿತಾಂಶವೇ ಸಾಕ್ಷಿ’ ಎಂದರು.
‘ಶಿಗ್ಗಾವಿ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರಿಂದ ಹಿಂದೂ ಮತ ಧ್ರುವೀಕರಣವಾಗುತ್ತದೆ ಎಂದು ಕೆಲವರು ಶಂಕೆ ವ್ಯಕ್ತಪಡಿಸಿದ್ದರು. ಆದರೆ, ಮತದಾರರು ಅಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಿಸಿದ್ದಾರೆ. ಇದು ಬಿಜೆಪಿಯವರ ಕೋಮುವಾದಿ ರಾಜಕಾರಣಕ್ಕೆ ನೀಡಿದ ಉತ್ತರವೂ ಆಗಿದೆ’ ಎಂದೂ ಪ್ರತಿಪಾದಿಸಿದರು.
‘2028ರ ಚುನಾವಣೆಗೆ ಮುನ್ನುಡಿ’
‘ಉಪ ಚುನಾವಣೆಯ ಫಲಿತಾಂಶ 2028ರ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ರಾಜ್ಯದ ಜನರ ಮುನ್ನುಡಿ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.
‘ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿಗೆ ಜಯ ಸಿಕ್ಕಿದೆ. ಭಾವನೆಗಳ ಬದಲಿಗೆ, ಬದುಕಿನ ಮೇಲಿನ ರಾಜಕಾರಣ ಬೇಕು ಎಂದು ಜನ ಸಂದೇಶ ನೀಡಿದ್ದಾರೆ’ ಎಂದು ಹೇಳಿದರು. ‘ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸೋಲು ಎಂದು ನಾನು ಹೇಳುವುದಿಲ್ಲ. ಈ ಕ್ಷೇತ್ರ ಗೆದ್ದಿದ್ದ ಕುಮಾರಸ್ವಾಮಿ, ಬಿಟ್ಟು ಹೋದ ಗುರುತಿಗೆ ಜನ ತೀರ್ಪು ನೀಡಿದ್ದಾರೆ‘ ಎಂದರು.
‘ರಾಜಕೀಯ ಲಾಭಕ್ಕೆ ಯತ್ನಿಸಿದವರಿಗೆ ಶಾಸ್ತಿ’
‘ಚನ್ನಪಟ್ಟಣದಲ್ಲಿ ನಾನು ನೀಡಿದ್ದ ಹೇಳಿಕೆಯನ್ನು ವಿವಾದ ಮಾಡಿ ರಾಜಕೀಯ ಲಾಭಕ್ಕೆ ಯತ್ನಿಸಿದವರಿಗೆ ತಕ್ಕ ಶಾಸ್ತಿ ಆಗಿದೆ’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
‘ಈ ಚುನಾವಣೆಯಲ್ಲೂ ಮುಸ್ಲಿಂ ಸಮುದಾಯ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಕೈ ಹಿಡಿದು ಬಲಪಡಿಸಿದೆ. ಕಾಂಗ್ರೆಸ್ ಸರ್ಕಾರದ ಪರ ವಿಶ್ವಾಸ ತೋರಿಸಿದೆ’ ಎಂದಿದ್ದಾರೆ.
‘ಮುಂದೆಯಾದರೂ ವಿರೋಧ ಪಕ್ಷಗಳು ನಮ್ಮ ಅಭಿವೃದ್ದಿಗೆ ಕೈ ಜೋಡಿಸಲಿ. ನಕಾರಾತ್ಮಕ ರಾಜಕಾರಣವನ್ನು ಕೈಬಿಡಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.