ಹುಬ್ಬಳ್ಳಿ: ‘ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ. ಆದರೆ, ಅದಕ್ಕೆ ಕೋರ್ಟ್ ಅನುಮತಿ ಅಗತ್ಯವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾನುವಾರ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ‘ಕೋರ್ಟ್ ಅನುಮತಿ ನೀಡಿದರೆ ಮಾತ್ರ ಪ್ರಕರಣ ಹಿಂಪಡೆಯಲು ಆಗುತ್ತದೆ. ಇಲ್ಲದಿದ್ದರೆ ಸಾಧ್ಯವಿಲ್ಲ’ ಎಂದರು.
‘ಸುಳ್ಳು ಪ್ರಕರಣಗಳು ದಾಖಲಾಗಿದ್ದರೆ, ಉದ್ದೇಶಪೂರ್ವಕವಾಗಿ ಪ್ರಕಣಗಳನ್ನು ದಾಖಲಿಸಿದ್ದರೆ ಅಥವಾ ಹೋರಾಟಗಳಿಗೆ ಸಂಬಂಧಿಸಿ ಪ್ರಕರಣಗಳನ್ನು ದಾಖಲಿಸಿದ್ದರೆ, ಅವುಗಳನ್ನು ಪರಿಶೀಲಿಸಲು ಸಂಪುಟ ಉಪಸಮಿತಿ ರಚಿಸಲಾಗುತ್ತದೆ. ಇದು ಎಲ್ಲ ಸರ್ಕಾರದಲ್ಲೂ ಅಸ್ತಿತ್ವದಲ್ಲಿರುತ್ತದೆ. ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ಪರಿಶೀಲಿಸಿದ ಸಮಿತಿ, ಅದು ಸುಳ್ಳು ಪ್ರಕರಣ ಎಂದು ತಿಳಿಸಿತ್ತು. ಆ ವರದಿ ಸಚಿವ ಸಂಪುಟಕ್ಕೆ ಬಂದಿದ್ದು, ನಾವು ಒಪ್ಪಿಕೊಂಡಿದ್ದೇವೆ. ಬಿಜೆಪಿ ಆಡಳಿತವಿದ್ದಾಗಲೂ ಅನೇಕ ಅಪರೂಪದ ಪ್ರಕರಣಗಳನ್ನು ಹಿಂಪಡೆದಿತ್ತು’ ಎಂದು ಸಮರ್ಥಿಸಿಕೊಂಡರು.
ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ‘ಬಿಜೆಪಿ ಸುಳ್ಳು ವಿಷಯಗಳ ಮೇಲೆ ಹಾಗೂ ನಿರಾಧಾರ ಆರೋಪದ ಮೇಲೆಯೇ ಯಾವಾಗಲೂ ಪ್ರತಿಭಟನೆ ಮಾಡೋದು’ ಎಂದು ಕಿಡಿಕಾರದಿರು.
‘ಕಾಂಗ್ರೆಸ್ ಭಯೋತ್ಪಾದಿತ ಬೆಂಬಲಿತ ಪಕ್ಷ’ ಎನ್ನುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ, ‘ಜೋಶಿ ಅವರೇ ಭಯೋತ್ಪಾದಕರು’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.