ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾಯುಕ್ತ ವಿಚಾರಣೆಗೆ ಹಾಜರಾಗುವ ಮೂಲಕ ಕಾನೂನಿಗೆ ಗೌರವ ಕೊಟ್ಟಿದ್ದಾರೆ. ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಅವರು ತಪ್ಪು ಮಾಡಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಉಪ ಚುನಾವಣೆಯ ಕಾರಣಕ್ಕೆ ಸಿದ್ದರಾಮಯ್ಯ ಅವರು ಒಂದು ವಾರ ಕಾಲಾವಕಾಶ ಕೇಳಬಹುದಿತ್ತು. ಆದರೆ, ಅಧಿಕಾರದಲ್ಲಿ ಇದ್ದುಕೊಂಡು ಅವಕಾಶ ದುರುಪಯೋಗ ಮಾಡಿಕೊಳ್ಳಬಾರದು ಎಂದು ವಿಚಾರಣೆಗೆ ಹಾಜರಾಗಿದ್ದಾರೆ’ ಎಂದರು.
‘ಎರಡು ಗಂಟೆ ಮಾತ್ರ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ’ ಎನ್ನುವ ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಈ ಪ್ರಶ್ನೆಯನ್ನು ಲೋಕಾಯುಕ್ತದವರಿಗೆ ಕೇಳಬೇಕು’ ಎಂದರು.
ರಾಜ್ಯದ ಬಾರ್ ಮಾಲೀಕರು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಬಗ್ಗೆ ಕೇಳಿದಾಗ, ‘ಆಡಳಿತಾತ್ಮಕ ವಿಚಾರದಲ್ಲಿ ಯಾರು ಬೇಕಾದರೂ ರಾಜ್ಯಪಾಲರಿಗೆ ದೂರು ನೀಡಬಹುದು. ಈ ಹಿಂದೆಯೂ ನೂರಾರು ದೂರುಗಳು ಬಂದಿದ್ದವು. ಇದೊಂದು ರಾಜಕೀಯ ಬಣ್ಣ’ ಎಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಆಪ್ತ ಸಹಾಯಕನ ಹೆಸರು ಬರೆದು ಬೆಳಗಾವಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕೇಳಿದಾಗ, ‘ಯಾರೇ ತಪ್ಪು ಮಾಡಿದರೂ ಪೊಲೀಸ್ ಇಲಾಖೆ ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.