ADVERTISEMENT

ಐದು ವರ್ಷ ನಾನೇ ಸಿಎಂ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 16:23 IST
Last Updated 2 ನವೆಂಬರ್ 2023, 16:23 IST
   

ಬೆಂಗಳೂರು/ಹೊಸಪೇಟೆ : ‘ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಕುರಿತು ಬಹಿರಂಗವಾಗಿ ಮಾತನಾಡಿದರೆ ಶಿಸ್ತುಕ್ರಮ ಖಚಿತ’ ಎಂದು ಕಾಂಗ್ರೆಸ್‌ ಹೈಕಮಾಂಡ್‌ ಬುಧವಾರವಷ್ಟೇ ಎಚ್ಚರಿಕೆ ನೀಡಿತ್ತು. ಅದರ ಮರುದಿನವೇ, ‘ಮುಂದಿನ ಐದು ವರ್ಷ ನಮ್ಮದೇ ಸರ್ಕಾರ, ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುವೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಪಕ್ಷದೊಳಗಿನ ತಮ್ಮ ಎದುರಾಳಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ಗುರುವಾರ ಹೊಸಪೇಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಷಯ ಪ್ರಸ್ತಾಪಿಸಿದೊಡನೆ ತುಸು ಏರಿದ ಧ್ವನಿಯಲ್ಲಿಯೇ ಪ್ರತಿಕ್ರಿಯಿಸಿದರು.

‘ಕೆಲಸ ಇಲ್ಲದೇ ಇರುವವರು ಮುಖ್ಯಮಂತ್ರಿ ಬದಲಾವಣೆ ವಿಚಾರ ಮಾತನಾಡುತ್ತಾರೆ, ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ, ಹೀಗಾಗಿ ಮಾತನಾಡುತ್ತಾರೆ' ಎಂದು ಸ್ವಪಕ್ಷೀಯ ಶಾಸಕರ ವಿರುದ್ಧವೇ ಹರಿಹಾಯ್ದರು.

ADVERTISEMENT

‘ಉಪಮುಖ್ಯಮಂತ್ರಿಗಳ ವಿಚಾರ ತೀರ್ಮಾನ ಮಾಡುವುದು ಪಕ್ಷದ ಹೈಕಮಾಂಡ್. ನಮ್ಮದು ರಾಷ್ಟ್ರೀಯ ಪಕ್ಷ, ಏನೇ ತೀರ್ಮಾನ ಆದರೂ ಹೈಕಮಾಂಡ್ ಜೊತೆ ಚರ್ಚೆ ಮಾಡಿಯೇ ಆಗುವುದು’ ಎಂದೂ ಅವರು ಹೇಳಿದರು.

ಏಕಾಏಕಿ ಸಿದ್ದರಾಮಯ್ಯ ನೀಡಿದ ಈ ಹೇಳಿಕೆ, ಕಾಂಗ್ರೆಸ್‌ನಲ್ಲಿ ನಾನಾ ರೀತಿಯ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಎಚ್ಚರಿಕೆ ನೀಡಿದ ಮರುದಿನವೇ ಹೇಳಿಕೆ!

‘ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜತೆಗೆ ಮಂಗಳವಾರ (ನ.1) ನಡೆಸಿದ್ದ ಸಭೆಯಲ್ಲಿ, ಅಧಿಕಾರ ಹಂಚಿಕೆ, ಪಕ್ಷ, ಸರ್ಕಾರದ ಬಗ್ಗೆ ಯಾರೊಬ್ಬರೂ ಮಾತನಾಡದಂತೆ ನೋಡಿಕೊಳ್ಳುವ  ಹೊಣೆಯನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ವಹಿಸಲಾಗಿತ್ತು. ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಎಲ್ಲ ವಿಷಯವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ. ಲೋಕಸಭೆ ಚುನಾವಣೆಯಲ್ಲಿ 20ರಿಂದ 25 ಸ್ಥಾನ ಗೆಲ್ಲಿಸಲು ಒಗ್ಗೂಡಿ ಕೆಲಸ ಮಾಡಿ ಎಂದೂ ವೇಣುಗೋಪಾಲ್ ಸಲಹೆ ನೀಡಿದ್ದರು’ ಎಂದು ಮೂಲಗಳು ಹೇಳಿದ್ದವು.

ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷದ ಬಳಿಕ ನಾಯಕತ್ವ ಬದಲಾವಣೆಯಾಗುತ್ತದೆ ಎಂಬ ಚರ್ಚೆಯನ್ನು ಜೀವಂತವಾಗಿಡಲು ಶಿವಕುಮಾರ್ ಬಣ ತನ್ನ ಯತ್ನವನ್ನು ಮುಂದುವರಿಸಿತ್ತು. ಈ ವಿಷಯದ ಬಗ್ಗೆ ಇಲ್ಲಿಯವರೆಗೆ ಪ್ರತಿಕ್ರಿಯಿಸದೇ ಇದ್ದ ಸಿದ್ದರಾಮಯ್ಯ ಅವರು, ಮೊದಲ ಬಾರಿಗೆ ‘ನಾನೇ ಐದು ವರ್ಷ ಮುಖ್ಯಮಂತ್ರಿ’ ಎಂದು ಹೇಳುವ ಮೂಲಕ 30 ತಿಂಗಳ ಅಧಿಕಾರ ಕಸಿಯಲು ತಂತ್ರ ಹೆಣೆಯುತ್ತಿರುವವರಿಗೆ ಎದಿರೇಟು ನೀಡಿದ್ದಾರೆಯೇ? ಮುಖ್ಯಮಂತ್ರಿ ಸ್ಥಾನದ ಮೇಲೆ ತಮ್ಮ ಹಿಡಿತ ಬಲಗೊಳಿಸುವ ಜತೆಗೆ, ಹೈಕಮಾಂಡ್‌ ಕೂಡ ತಮ್ಮ ಬೆಂಬಲಕ್ಕಿದೆ ಎಂಬ ಸಂದೇಶವನ್ನು ತಮ್ಮ ಎದುರಾಳಿ ಗುಂಪಿಗೆ ರವಾನಿಸುವ ಕೆಲಸವನ್ನೂ ಮಾಡಿದ್ದಾರೆಯೇ ಎಂಬ ಚರ್ಚೆ ಪಕ್ಷದ ಪಡಸಾಲೆಯಲ್ಲಿ ಶುರುವಾಗಿದೆ.

‘ಮುಖ್ಯಮಂತ್ರಿ ಬದಲಾವಣೆ, ಮತ್ತೆ ಮೂವರಿಗೆ ಉಪಮುಖ್ಯಮಂತ್ರಿ ಹುದ್ದೆ’ ಇಂತಹ ವಿಷಯಗಳು ಕಳೆದ ಒಂದು ತಿಂಗಳಿನಿಂದ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಲೇ ಇವೆ. ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಕುರಿತ ವಿವಾದ ತಾರಕಕ್ಕೇರಿದಾಗ, ‘ಪಕ್ಷ–ಸರ್ಕಾರದ ವಿಷಯದಲ್ಲಿ ಯಾರೊಬ್ಬರೂ ಮಾತನಾಡಕೂಡದು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಎಚ್ಚರಿಕೆಯ ಮಾತುಗಳನ್ನು ಆಡಿದ್ದರು. ಆ ಬಳಿಕ, ಕೆಲದಿನ ಈ ವಿಚಾರಗಳು ಮುನ್ನೆಲೆಗೆ ಬಂದಿರಲಿಲ್ಲ.

ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಅವರು, ‘ಎರಡು ವರ್ಷಗಳ ಬಳಿಕ ಶಿವಕುಮಾರ್‌ ಮುಖ್ಯಮಂತ್ರಿಯಾಗುವುದು ಗ್ಯಾರಂಟಿ’ ಎಂದು ಹೇಳುವ ಮೂಲಕ ಮತ್ತೊಂದು ದಾಳ ಉರುಳಿಸಿದ್ದರು.  ಇದರ ಬೆನ್ನಲ್ಲೇ, ಗೃಹ ಸಚಿವ ಜಿ. ಪರಮೇಶ್ವರ ಅವರ ಮನೆಯಲ್ಲಿ ಭೋಜನ ಕೂಟದ ಹೆಸರಿನಲ್ಲಿ ನಡೆದ ರಹಸ್ಯ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಸಚಿವರಾದ ಸತೀಶ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ ಭಾಗಿಯಾಗಿದ್ದರು. ಮುಖ್ಯಮಂತ್ರಿ ಗಾದಿಗೆ ಶಿವಕುಮಾರ್ ಪಟ್ಟು ಹೆಚ್ಚಾದರೆ, ದಲಿತ ಮುಖ್ಯಮಂತ್ರಿಯ ಪ್ರತಿದಾಳ ಉರುಳಿಸುವ ಬಗ್ಗೆ ತಂತ್ರಗಾರಿಕೆ ಹೆಣೆಯವುದು ರಹಸ್ಯ ಸಭೆಯ ಕಾರ್ಯಸೂಚಿ ಎಂದೂ ಹೇಳಲಾಗಿತ್ತು.

ಏಕೆಂದರೆ, ಅದೇ ದಿನ ಮಧ್ಯಾಹ್ನ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೇ ಮೂರು ತಾಸಿಗೂ ಹೆಚ್ಚು ಹೊತ್ತು ಸಭೆ ನಡೆಸಿದ್ದರು. ಈ ಸಭೆಯ ವೇಳೆ, ಭೋಜನ ಕೂಟದ ಸುಳಿವೇ ಇರಲಿಲ್ಲ. ಅಂದು ಬೆಂಗಳೂರಿನಲ್ಲೇ ಶಿವಕುಮಾರ್ ಇದ್ದರೂ ಭೋಜನಕೂಟಕ್ಕೆ ಅವರಿಗೆ ಆಹ್ವಾನ ಇರಲಿಲ್ಲ. ಕೆಪಿಸಿಸಿ ಅಧ್ಯಕ್ಷರನ್ನೇ ಹೊರಗಿಟ್ಟು ಸಭೆ ನಡೆಸಿರುವುದು, ನಾನಾ ರೀತಿಯ ಚರ್ಚೆಗೆ ಕಾರಣವಾಗಿತ್ತು. 

ಸರ್ಕಾರ ಮತ್ತು ಪಕ್ಷದೊಳಗೆ ಉಲ್ಬಣಗೊಳ್ಳುತ್ತಿರುವ ‘ಬಣ ಪೈಪೋಟಿ’ ವರ್ಚಸ್ಸಿಗೆ ಧಕ್ಕೆ ತರುತ್ತದೆ ಎಂಬುದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ಮಧ್ಯ ಪ್ರವೇಶಿಸಿತು. ಸೋಮವಾರ ರಾತ್ರಿ ಬೆಂಗಳೂರಿಗೆ ದೌಡಾಯಿಸಿದ ವೇಣುಗೋಪಾಲ್ ಹಾಗೂ ಸುರ್ಜೇವಾಲಾ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರನ್ನೇ ಕೂರಿಸಿಕೊಂಡು ಸಮಾಲೋಚನೆ ನಡೆಸಿದರು. ಬಹಿರಂಗವಾಗಿ ಮಾತನಾಡದಂತೆ ಸಚಿವರು, ಶಾಸಕರಿಗೆ ನೀವೇ ಸೂಚಿಸಿ, ಅವರ ಮಾತಿನ ಮೇಲೆ ಕಡಿವಾಣ ಹಾಕುವಂತೆ ನೋಡಿಕೊಳ್ಳದಿದ್ದರೆ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು.

ಅದರ ಬೆನ್ನಲ್ಲೇ, ಶಿವಕುಮಾರ್ ಸಮ್ಮುಖದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸುರ್ಜೇವಾಲಾ, ಪಕ್ಷ, ಅಧಿಕಾರ ಹಂಚಿಕೆ, ಸರ್ಕಾರದ ಬಗ್ಗೆ ಮಾತನಾಡಿದರೆ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೊಸಪೇಟೆಯಲ್ಲಿ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಉದ್ಘಾಟಿಸಿ ಪ್ರಯೋಗಾಲಯ ಕೊಠಡಿ ವೀಕ್ಷಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.