ADVERTISEMENT

ಸಿಎಲ್‌ಪಿ ಸಭೆ: ಬಿಜೆಪಿ ವಿರುದ್ಧ ಒಗ್ಗಟ್ಟು ಪ್ರದರ್ಶನಕ್ಕೆ ಸಿಎಂ ಸಲಹೆ

ಅನುದಾನಕ್ಕೆ ಶಾಸಕರ ಪಟ್ಟು

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 19:06 IST
Last Updated 18 ಜುಲೈ 2024, 19:06 IST
ಪ್ರತಾಪಸಿಂಹಗೆ ‘ಪ್ರೀತಿಯ’ ಸಲಹೆ ನೀಡಿದ ಸಿದ್ದರಾಮಯ್ಯ
ಪ್ರತಾಪಸಿಂಹಗೆ ‘ಪ್ರೀತಿಯ’ ಸಲಹೆ ನೀಡಿದ ಸಿದ್ದರಾಮಯ್ಯ   

ಬೆಂಗಳೂರು: ‘‌ವಿಧಾನ ಮಂಡಲ ಅಧಿವೇಶನದಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸಬೇಕು, ಅಕ್ರಮಣಕಾರಿಯಾಗಿ ಉತ್ತರ ನೀಡಬೇಕು’ ಎಂದು ಪಕ್ಷದ ಶಾಸಕರು, ಸಚಿವರಿಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ನಗರದ ರ‍್ಯಾಡಿಸನ್ ಬ್ಲ್ಯೂ ಹೋಟೆಲ್‌ನಲ್ಲಿ ಗುರುವಾರ ರಾತ್ರಿ ನಡೆಯಿತು ನಡೆಯಿತು.

‘ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯವರು ಎಲ್ಲ ತಯಾರಿ ಮಾಡಿಕೊಂಡೇ ಮುಗಿಬೀಳುತ್ತಿದ್ದಾರೆ. ಅವರ ಆಕ್ರಮಣಕಾರಿ ನಡೆಗೆ ಅಷ್ಟೇ ಆಕ್ರಮಣಕಾರಿಯಾಗಿ, ರಕ್ಷಣಾತ್ಮಕವಾಗಿ ನಿಂತು ಬಿಜೆಪಿಯವರ ಬಾಯಿ ಮುಚ್ಚಿಸಬೇಕಿದೆ. ಎಲ್ಲ ಸಚಿವರು, ಶಾಸಕರು ಕಡ್ಡಾಯವಾಗಿ ಕಲಾಪದಲ್ಲಿ ಹಾಜರಾಗಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ’ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ADVERTISEMENT

‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ  ಹಗರಣದ ಬೆನ್ನಲ್ಲೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ನಿವೇಶನ ಹಂಚಿಕೆ ಸೇರಿದಂತೆ ಇತರ ವಿಚಾರಗಳನ್ನು ಎತ್ತಿಕೊಂಡು ಬಿಜೆಪಿಯವರು ಗದ್ದಲ ಸೃಷ್ಟಿಸಬಹುದು. ಹಾಗೆಂದು ಯಾರೂ ಹಿಂಜರಿಯಬೇಕಿಲ್ಲ. ಎಲ್ಲವನ್ನೂ ಒಗ್ಗಟ್ಟಿನಿಂದ ಎದುರಿಸಬೇಕು. ಮಸೂದೆಗಳಿಗೆ ಕೂಡಾ ಗದ್ದಲದ ನಡುವೆಯೇ ಅಂಗೀಕಾರ ನೀಡಬೇಕಾದ ಸ್ಥಿತಿ ಬರಬಹುದು ಎಂದೂ ಹೇಳಿದ್ದಾರೆ’ ಎಂದು ಗೊತ್ತಾಗಿದೆ.

ಕೆಪಿಸಿಸಿ ಅಧ್ಯಕರಾದ ಡಿ.ಕೆ. ಶಿವಕುಮಾರ್‌ ಅವರು ಮಾತನಾಡಿ, ‘ನಾನು ಕೂಡಾ ನಗರಾಭಿವೃದ್ಧಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿಯವರ ಪಾತ್ರ ಇಲ್ಲ. ನಿಯಮದ ಪ್ರಕಾರವೇ ನಿವೇಶನಗಳ ಹಂಚಿಕೆ ಆಗಿದೆ. ಜೆಡಿಎಸ್‌– ಬಿಜೆಪಿಯವರಿಗೂ ಮುಡಾ ನಿವೇಶನ ಹಂಚಿಕೆಯಾಗಿದೆ. ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪವಾದಾಗ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಲಹೆ ನೀಡಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಅಲ್ಲದೆ, ಯಾವಾಗ ಬೇಕಿದ್ದರೂ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಘೋಷಣೆ ಆಗಬಹುದು. ಶಾಸಕರು, ಕಾರ್ಯಕರ್ತರ ಜೊತೆ ಸೇರಿ ಪಕ್ಷ ಸಂಘಟನೆಯ ಕೆಲಸ ಮಾಡಬೇಕು ಎಂದೂ ಶಿವಕುಮಾರ್‌ ಸೂಚನೆ ನೀಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಸಚಿವರಾದ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ, ಎಚ್.ಕೆ. ಪಾಟೀಲ, ಎಚ್.ಸಿ. ಮಹದೇವಪ್ಪ, ಎನ್‌.ಎಸ್‌. ಬೋಸರಾಜು, ಮುಖ್ಯಮಂತ್ರಿಯ ರಾಜಕೀಯ ಸಲಹೆಗಾರರಾದ ಬಿ.ಆರ್. ಪಾಟೀಲ, ಮುಖ್ಯ ಸಚೇತಕ ಅಶೋಕ ಪಟ್ಟಣ್, ಸಿಎಲ್‌ಪಿ ಕಾರ್ಯದರ್ಶಿ ಅಲ್ಲಮ ಪ್ರಭು ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಸೇರಿ ಹಲವರು ಸಭೆಯಲ್ಲಿ ಇದ್ದರು.‌

ಅನುದಾನ ಬಿಡುಗಡೆ ಆಗದಿರುವ ಬಗ್ಗೆ ಕೆಲಸ ಶಾಸಕರು ಸಭೆಯಲ್ಲಿ ಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಅವಧಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕಾರಣಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಸಿಕ್ಕಿಲ್ಲ. ಈ ಬಾರಿಯಾದರೂ ನೀಡದೇ ಇದ್ದರೆ ಕ್ಷೇತ್ರದಲ್ಲಿ ಓಡಾಡುವುದೇ ಕಷ್ಟವಾಗಲಿದೆ ಎಂದೂ ಶಾಸಕರು ಅಳಲು ತೋಡಿಕೊಂಡರು ಎಂದೂ ಮೂಲಗಳು ಹೇಳಿವೆ.

ವರ್ಗಾವಣೆ ವಿಚಾರವನ್ನೂ ಕೆಲವು ಪ್ರಸ್ತಾಪಿಸಿದ್ದಾರೆ. ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ ಕೌನ್ಸೆಲಿಂಗ್‌ ಪದ್ಧತಿ ಜಾರಿಗೊಳಿಸಿರುವುದಕ್ಕೆ ಕೆಲವು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಚಿವ ಬೈರತಿ ಸುರೇಶ್‌ ಅವರ ಹೆಸರು ಪ್ರಸ್ತಾಪಿಸದೆ, ಮಂಡಳಿಯಲ್ಲಿ ಹಸ್ತಕ್ಷೇಪದ ಬಗ್ಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರೂ ಆಗಿರುವ‌ ಶಾಸಕ ವಿನಯ ಕುಲಕರ್ಣಿ ಪ್ರಸ್ತಾಪಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಸಚಿವರ ವಿರುದ್ಧ ಮತ್ತೆ ಶಾಸಕರ ಆಕ್ರೋಶ

‘ಸಚಿವರು ನಮ್ಮ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ಕ್ಷೇತ್ರದ ಕೆಲಸಗಳ ಬಗ್ಗೆ ಮಾತನಾಡಲು ಭೇಟಿಗೆ ಅವಕಾಶವನ್ನೇ ಕೊಡುತ್ತಿಲ್ಲ. ಮುಖ ಕೊಟ್ಟು ಮಾತನಾಡುವ ಸೌಜನ್ಯವನ್ನೂ ತೋರಿಸುತ್ತಿಲ್ಲ. ವರ್ಗಾವಣೆ ವಿಚಾರವಾಗಿಯೂ ಸ್ಪಂದಿಸುತ್ತಿಲ್ಲ. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ ಎಂದು ಸಚಿವರ ವಿರುದ್ಧ ಕೆಲವು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಗೆ ಕೌನ್ಸೆಲಿಂಗ್‌ ಪದ್ಧತಿ ಜಾರಿಗೊಳಿಸಿರುವುದಕ್ಕೂ ಕೆಲವು ಹಿರಿಯ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.’ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ. 

‘ಏಳೆಂಟು ಸಚಿವರನ್ನು ಈಗಲೇ ಸಚಿವ ಸಂಪುಟದಿಂದ ಕೈಬಿಟ್ಟರೆ ಒಳ್ಳೆಯದು’ ಎಂದು ಸಚಿವರ ಕಾರ್ಯವೈಖರಿಯ ಬಗ್ಗೆ ಕೆಲವರು ಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಭೈರತಿ ಸುರೇಶ್ ಹೆಸರು ಪ್ರಸ್ತಾಪಿಸದೆ, ಪರೋಕ್ಷವಾಗಿ ಶಾಸಕ ವಿನಯ ಕುಲಕರ್ಣಿ ಅಸಮಾಧಾನ ಹೊರ ಹಾಕಿದ್ದಾರೆ. ‘ನಾನು ಅಧ್ಯಕ್ಷನಾಗಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ. ಪ್ರತಿಯೊಂದಕ್ಕೂ ಹಸ್ತಕ್ಷೇಪ ಮಾಡಲಾಗುತ್ತಿದೆ. ನನ್ನ ಕೆಲಸಗಳಿಗೆ ಅಡ್ಡಿಪಡಿಸುವ ಕೆಲಸ ನಡೆಯುತ್ತಿದೆ. ಇದನ್ನು ಎಷ್ಟು ದಿನ  ಸಹಿಸಿಕೊಂಡು ಕೆಲಸ ಮಾಡಲಿ. ನನಗೆ ಕೊಟ್ಟಿರುವ ನಿಗಮ, ಮಂಡಳಿಯಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ನೀಡದಿದ್ದರೆ ಹೇಗೆ’ ಎಂದು ಪ್ರಶ್ನಿಸಿದ್ದಾರೆ ಎಂದೂ ಗೊತ್ತಾಗಿದೆ. 

‘ಅನುದಾನ ನೀಡಿ’

‘ನಮಗೆ ಅನುದಾನ‌ ಇಲ್ಲದೆ ಕ್ಷೇತ್ರದಲ್ಲಿ ಜನರಿಗೆ ಉತ್ತರ ಹೇಳುವುದು ಕಷ್ಟವಾಗಿದೆ. ಕಳೆದ ಒಂದು ವರ್ಷದಿಂದಲೂ ಗ್ಯಾರಂಟಿ ಕಾರಣಕ್ಕೆ ಅನುದಾನ ಕೇಳಿರಲಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಈ ಬಾರಿಯಾದರೂ ಅನುದಾನ ಕೊಡಬೇಕು. ಇಲ್ಲದಿದ್ದರೆ ಕ್ಷೇತ್ರದಲ್ಲಿ ಓಡಾಡುವುದೇ ಕಷ್ಡವಾಗಲಿದೆ ಎಂದು ಶಾಸಕರು ಅಲವತ್ತುಕೊಂಡಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.