ADVERTISEMENT

ದಸರಾ ಬಳಿಕ ಸಿದ್ದರಾಮಯ್ಯ ರಾಜೀನಾಮೆ: ವಿಜಯೇಂದ್ರ

ಕಾಂಗ್ರೆಸ್‌ ಹೈಕಮಾಂಡ್ ಮಟ್ಟದಲ್ಲೂ ಇದೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 13:48 IST
Last Updated 6 ಅಕ್ಟೋಬರ್ 2024, 13:48 IST
<div class="paragraphs"><p>ಬಿ.ವೈ.ವಿಜಯೇಂದ್ರ ಮತ್ತು ಸಿದ್ದರಾಮಯ್ಯ</p></div>

ಬಿ.ವೈ.ವಿಜಯೇಂದ್ರ ಮತ್ತು ಸಿದ್ದರಾಮಯ್ಯ

   

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ದಸರಾ ಬಳಿಕ ರಾಜೀನಾಮೆ ನೀಡುತ್ತಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮುಡಾ ಹಗರಣದ ವಿರುದ್ಧ ಮೈತ್ರಿಕೂಟದಿಂದ ಹಮ್ಮಿಕೊಂಡಿದ್ದ ಪಾದಯಾತ್ರೆ ಯಶಸ್ವಿಯಾಗಿದ್ದು, ಮುಖ್ಯಮಂತ್ರಿ ರಾಜೀನಾಮೆ ಕೊಟ್ಟೇ ಕೊಡುತ್ತಾರೆ. ಇದಕ್ಕೆ ಕ್ಷಣಗಣನೆ ಆರಂಭವಾಗಿದೆ’ ಎಂದರು.

ADVERTISEMENT

‘ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯುತ್ತೇನೆ ಎಂದು ನಿತ್ಯವೂ ಹೇಳಿಕೊಳ್ಳುವ ಕೆಟ್ಟ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬಂದಿದೆ. ಅವರನ್ನು ಬೆಂಬಲಿಸಿ ಸಚಿವರೂ ಹೇಳಿಕೆ ನೀಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಸಚಿವ ಸತೀಶ ಜಾರಕಿಹೊಳಿ ಅವರನ್ನು ಸಿದ್ದರಾಮಯ್ಯ ಅವರೇ ದೆಹಲಿಗೆ ಕಳುಹಿಸಿಕೊಟ್ಟಿದ್ದಾರೆ. ಯಾವ ಸಂದರ್ಭದಲ್ಲಿ ಬೇಕಾದರೂ ರಾಜೀನಾಮೆ ಕೊಡಬಹುದು. ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲೂ ಈ ಕುರಿತು ಚಿಂತನೆ ನಡೆದಿದೆ. ಇದು ಮುಖ್ಯಮಂತ್ರಿಗೂ ಗೊತ್ತಿದೆ’ ಎಂದು ಹೇಳಿದರು. ‘ಸಿಎಂ ಸ್ಥಾನಕ್ಕೆ 7–8 ಮಂದಿ ಕಾಯುತ್ತಿದ್ದಾರೆ’ ಎಂದರು.

‘ಮುಡಾ ಪ್ರಕರಣ 14 ನಿವೇಶನಗಳಿಗಷ್ಟೆ ಸಂಬಂಧಿಸಿದ್ದಲ್ಲ. ಸಾವಿರಾರು ಕೋಟಿ ರೂಪಾಯಿ ಹಗರಣ ಇದಾಗಿದೆ. ಮುಂದೆ ಇದು ಬಹಿರಂಗವಾಗುತ್ತದೆ. ಯಾವುದೇ ಹಗರಣ ನಡೆದಿಲ್ಲ ಎಂದು ವಾದಿಸುತ್ತಿದ್ದವರಿಗೆ ಈಗ ಯಾವ ಪರಿಸ್ಥಿತಿ ಬಂದಿದೆ ನೋಡಿ’ ಎಂದು ವ್ಯಂಗ್ಯವಾಡಿದರು.

‘ತಪ್ಪಿನ ಅರಿವಾದ್ದರಿಂದಲೇ 14 ನಿವೇಶನ ವಾಪಸ್ ಮಾಡಿದ್ದಾರೆ. ಅರೋಪಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗೆ ಅಧಿಕಾರದಲ್ಲಿ ಮುಂದುವರಿಯುವ ಅರ್ಹತೆ ಇಲ್ಲ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಅನೇಕ ಸವಾಲುಗಳನ್ನು ಹಾಕಿದ್ದರು. ಈಗ ಅವರಿಗೇ ಈ ಪರಿಸ್ಥಿತಿ ಬಂದಿರುವಾಗ ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕಾಗುತ್ತದೆ. ಅಧಿಕಾರಕ್ಕೆ ಅಂಟಿಕೊಳ್ಳದೇ ಪಾರದರ್ಶಕ ತನಿಖೆಗೆ ಒಳ‍‍ಪಡಬೇಕು’ ಎಂದರು.

‘ರಾಜ್ಯ ಸರ್ಕಾರದ ಹಗರಣಗಳ ವಿರುದ್ಧ ಪಾದಯಾತ್ರೆಯನ್ನು ನಾವು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರನ್ನು ಕೇಳಿ ನಡೆಸಿರಲಿಲ್ಲ. ಅವರ ಹೇಳಿಕೆ ಜೆಡಿಎಸ್‌ ಆಂತರಿಕ ವಿಚಾರ; ಕುಮಾರಸ್ವಾಮಿ ಅದನ್ನು ನೋಡಿಕೊಳ್ಳುತ್ತಾರೆ. ಜಿಟಿಡಿ ಯಾವಾಗ ಬೇಕಾದರೂ ಸರಿಹೋಗಬಹುದು’ ಎಂದು ‍ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.