ಗಂಗಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಗಂಗಾವತಿ ಮಾರ್ಗವಾಗಿ ಬಳ್ಳಾರಿಗೆ ತೆರಳುವಾಗ ಅವರ ಬೆಂಗಾವಲು ವಾಹನಗಳ ವಿರುದ್ಧ ದಿಕ್ಕಿಗೆ ಶಾಸಕ ಜನಾರ್ದನ ರೆಡ್ಡಿ ಕಾರುಗಳು ಸಾಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರೆಡ್ಡಿ ಅವರ ಒಂದು ಹಾಗೂ ಅವರ ಬೆಂಬಲಿಗರ ಎರಡು ಕಾರುಗಳನ್ನು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.
‘ಝೀರೊ ಟ್ರಾಫಿಕ್’ ನಿಯಮ ಉಲ್ಲಂಘನೆ ಮಾಡಿದ್ದರಿಂದ ಪೊಲೀಸರು ರೆಡ್ಡಿಯ ಮೂವರು ಕಾರು ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಎಫ್‌ಐಆರ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ನಿಯಮ ಉಲ್ಲಂಘಿಸಿದ ವಾಹನಗಳನ್ನು ಇಲ್ಲಿನ ಸಂಚಾರ ಪೊಲೀಸ್ ಠಾಣೆಗೆ ತರಲಾಗದ್ದು ಪೊಲೀಸರು ಪಂಚನಾಮೆ ಮಾಡಿದರು.
ಈ ಘಟನೆ ಕುರಿತು ವಿಡಿಯೊ ಹೇಳಿಕೆ ನೀಡಿರುವ ಜನಾರ್ದನ ರೆಡ್ಡಿ ‘ಬಳ್ಳಾರಿಯ ಮನೆಯಲ್ಲಿ ಅಂದು ಹೋಮ ಆಯೋಜಿಸಲಾಗಿತ್ತು. ತುರ್ತಾಗಿ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗಬೇಕಿದ್ದರೂ ಸಂಚಾರ ದಟ್ಟಣೆಯಲ್ಲಿಯೇ ಸುಮಾರು ಅರ್ಧಗಂಟೆ ಕಾದಿದ್ದೇನೆ. ಯಾರೇ ಮುಖ್ಯಮಂತ್ರಿಯಾದರೂ ಜನರಿಗೆ ತೊಂದರೆ ಕೊಡಬಾರದು’ ಎಂದಿದ್ದಾರೆ.
‘ತುರ್ತಾಗಿ ಕಾರ್ಯಕ್ರಮಕ್ಕೆ ಹೋಗಬೇಕಿದ್ದರಿಂದ ಮಾತ್ರ ರಸ್ತೆ ವಿಜಭಕ ದಾಟಿ ಹೋಗಿದ್ದೇನೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಮಾಧ್ಯಮಗಳೂ ಇದನ್ನು ತಪ್ಪಾಗಿ ಗ್ರಹಿಸಿವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.