ADVERTISEMENT

ಬಂಡಾಯ ಶಮನಕ್ಕೆ ಸಿಎಂ ಯಡಿಯೂರಪ್ಪ ರಂಗಪ್ರವೇಶ?

ದೂರ ಉಳಿದ ಗವಿಯಪ್ಪ, ರಾಣಿ ಸಂಯುಕ್ತಾ; ಭಿನ್ನಮತ ಹೆಚ್ಚಿಸಿದ ಬಿಜೆಪಿ ಚಿಂತೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 19 ನವೆಂಬರ್ 2019, 19:30 IST
Last Updated 19 ನವೆಂಬರ್ 2019, 19:30 IST
   

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ, ಬಂಡಾಯ ಶಮನಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರ ಮೊರೆ ಹೋಗಿದೆ. ಸ್ವತಃ ಸಿ.ಎಂ. ಅವರೇ ರಂಗ ಪ್ರವೇಶ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಆರೋಗ್ಯ ಸಚಿವ ಬಿ. ಶ್ರೀರಾಮುಲು, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಅವರು ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ ಅರಸ್‌ ಅವರ ಮನವೊಲಿಕೆಗೆ ಮಾಡಿದ ಪ್ರಯತ್ನಗಳೆಲ್ಲ ವಿಫಲಗೊಂಡಿವೆ. ಹೀಗಾಗಿ ಸ್ವತಃ ಮುಖ್ಯಮಂತ್ರಿಯವರೇ ಅವರ ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ಗೊತ್ತಾಗಿದೆ.

ಈಗಾಗಲೇ ಸಿ.ಎಂ. ಆಪ್ತರು ಅರಸ್‌ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಯಾವುದಾದರೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಕೊಡುವ ಭರವಸೆ ಕೊಟ್ಟಿದ್ದಾರೆ. ಆದರೆ, ಅದಕ್ಕೆ ಅರಸ್‌ ಅವರು ಸೊಪ್ಪು ಹಾಕಿಲ್ಲ. ನಾಮಪತ್ರ ವಾಪಸ್‌ ಪಡೆಯುವ ದಿನಾಂಕದೊಳಗೆ ಸ್ವತಃ ಸಿ.ಎಂ. ಕ್ಷೇತ್ರಕ್ಕೆ ಬಂದು ಅರಸ್‌ ಅವರ ಮನವೊಲಿಸಲಿದ್ದಾರೆ. ಈ ವಿಷಯವನ್ನು ಅರಸ್‌ ಅವರೇ ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

ADVERTISEMENT

ಆನಂದ್‌ ಸಿಂಗ್‌ ಅವರಿಗೆ ಟಿಕೆಟ್‌ ಘೋಷಿಸಿದ ನಂತರ ಅರಸ್‌ ಅವರು ಪಕ್ಷದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು. ಒಂದು ಹೆಜ್ಜೆ ಮುಂದೆ ಹೋಗಿ ಸೋಮವಾರ ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದರು. ಅವರ ಈ ನಿರ್ಧಾರವನ್ನು ಸ್ವಾಗತಿಸಿ ಅವರ ಬೆಂಬಲಿಗರು 101 ಲೀಟರ್‌ ಹಾಲಿನ ಅಭಿಷೇಕ ಮಾಡಿ ಅಭಿಮಾನ ಮೆರೆದರು.

ಅಸಮಾಧಾನಗೊಂಡಿರುವ ಅರಸ್‌ ಅವರು ಹೆಚ್ಚೆಂದರೆ ಪಕ್ಷದಿಂದ ಅಂತರ ಕಾಯ್ದುಕೊಳ್ಳಬಹುದು ಎಂದು ಮುಖಂಡರು ಅಂದುಕೊಂಡಿದ್ದರು. ಆದರೆ, ಅವರು ಬಂಡಾಯವೆದ್ದು ನಾಮಪತ್ರ ಸಲ್ಲಿಸಿರುವುದರಿಂದ ಬಿಜೆಪಿ ಮುಖಂಡರಲ್ಲಿ ಚಡಪಡಿಕೆ ಹೆಚ್ಚಾಗಿದೆ.

ದೂರ ಉಳಿದ ಗವಿಯಪ್ಪ, ಸಂಯುಕ್ತಾ:ಪಕ್ಷದ ನಿರ್ಧಾರದ ವಿರುದ್ಧ ಮುನಿಸಿಕೊಂಡಿರುವ ಮಾಜಿಶಾಸಕ ಎಚ್‌.ಆರ್‌. ಗವಿಯಪ್ಪ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷೆ ರಾಣಿ ಸಂಯುಕ್ತಾ ಇದುವರೆಗೆ ಪಕ್ಷದ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಿಲ್ಲ. ಆನಂದ್‌ ಸಿಂಗ್‌ಗೆ ಟಿಕೆಟ್‌ ಕೊಟ್ಟ ನಂತರ ಗವಿಯಪ್ಪನವರು ಕ್ಷೇತ್ರದತ್ತ ಮುಖವೇ ಮಾಡಿಲ್ಲ. ಅವರಿಗೆ ವಹಿಸಿದ ಕ್ಷೇತ್ರದ ಉಸ್ತುವಾರಿ ಕೂಡ ತಿರಸ್ಕರಿಸಿದ್ದಾರೆ. ತಿಂಗಳ ಹಿಂದೆ ನೇಮಕ ಮಾಡಿದ ಸಣ್ಣ ಕೈಗಾರಿಕೆ ನಿಗಮದ ಅಧ್ಯಕ್ಷ ಸ್ಥಾನವೂ ಒಪ್ಪಿಕೊಂಡಿಲ್ಲ.

ಇನ್ನೂ ರಾಣಿ ಸಂಯುಕ್ತಾ ಅವರು ಕ್ಷೇತ್ರದಲ್ಲಿದ್ದರೂ ಪಕ್ಷದ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಿಲ್ಲ. ಶ್ರೀರಾಮುಲು ಅವರು ನಡೆಸಿದ ಮನವೊಲಿಕೆ ಪ್ರಯತ್ನ ವಿಫಲಗೊಂಡಿದೆ. ಒಂದೆಡೆ ಬಂಡಾಯ, ಮತ್ತೊಂದೆಡೆ ಪ್ರಮುಖ ಮುಖಂಡರು ಅಂತರ ಕಾಯ್ದುಕೊಂಡಿರುವುದರಿಂದ ಸಹಜವಾಗಿಯೇ ಬಿಜೆಪಿಯ ಚಿಂತೆ ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.