ನವದೆಹಲಿ: ‘ಕರ್ನಾಟಕದ ಪತ್ರಕರ್ತ ರಿಗೆ ದೀಪಾವಳಿ ಹಬ್ಬಕ್ಕೆ ಸ್ವೀಟ್ಸ್ ಜೊತೆಗೆ ಹಣ ನೀಡಿರುವ ಪ್ರಕರಣದ ನೈತಿಕಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅವರನ್ನು ಬಂಧಿಸಬೇಕು’ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಆಗ್ರಹಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು, ‘ಬಿಜೆಪಿ ಸರ್ಕಾರ ನಿರಂತರ ಭ್ರಷ್ಟಾಚಾರದಲ್ಲಿ ತೊಡಗಿದೆ. ಅದನ್ನು ಮುಚ್ಚಿಡಲು ಮುಖ್ಯಮಂತ್ರಿ ಅವರು ಲಂಚದ ಆಮಿಷ ಒಡ್ಡಿದ್ದಾರೆ. ಈ ಹಣ ಎಲ್ಲಿಂದ ಬಂತು’ ಎಂದು ಪ್ರಶ್ನಿಸಿದರು.
‘ಕೆಲ ಪತ್ರಕರ್ತರು ಹಣ ತಿರಸ್ಕರಿಸಿದ್ದಾರೆ. ಪತ್ರಿಕಾ ಸಮೂಹವೊಂದು ಬೊಮ್ಮಾಯಿ ಅವರಿಗೆ ಅವರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಅವರ ಭ್ರಷ್ಟಾಚಾರವನ್ನು ಪತ್ರಕರ್ತರು ಬಯಲಿಗೆ ತಂದಿದ್ದಾರೆ. ಅಧಿಕಾರದಲ್ಲಿ ಮುಂದುವರಿಯಲು ಮುಖ್ಯಮಂತ್ರಿ ಅವರಿಗೆ ನೈತಿಕತೆ ಇಲ್ಲ’ ಎಂದು ಹೇಳಿದರು.
‘ಇನ್‌ಸ್ಪೆಕ್ಟರ್ ನಂದೀಶ್ ಹೃದಯಾಘಾತಕ್ಕೆ ₹70 ಲಕ್ಷ ಲಂಚದ ಒತ್ತಡವೇ ಕಾರಣ ಎಂದು ಸಚಿವ ಎಂ.ಟಿ.ಬಿ ನಾಗರಾಜ್ ಹೇಳಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ’ ಎಂದು ಪ್ರಶ್ನಿಸಿದರು.
‘ಕಾಮಗಾರಿಗಳಲ್ಲಿ ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘ ಪ್ರಧಾನಿ ಅವರಿಗೆ ವರ್ಷದ ಹಿಂದೆಯೇ ಪತ್ರ ಬರೆದಿದೆ. ಮಠಕ್ಕೆ ನೀಡುವ ಅನುದಾನಕ್ಕೆ ಕಮಿಷನ್ ನೀಡಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸಿದ್ದರು. ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟವೂ ಈ ಬಗ್ಗೆ ಧ್ವನಿ ಎತ್ತಿದೆ. ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ಮಾಡಬೇಕು ಎಂದು ಒತ್ತಾಯಿಸಿದ್ದೆವು. ಸರ್ಕಾರ ಇದಕ್ಕೆ ಹಿಂದೇಟು ಹಾಕುತ್ತಿದೆ‘ ಎಂದು ಅವರು ಹೇಳಿದರು.
‘ಭಾರತ್ ಜೋಡೋ ಯಾತ್ರೆ’ ಹಾಗೂ ‘ಮೇಕೆದಾಟು ಪಾದಯಾತ್ರೆ’ ವೇಳೆ ಕಾಂಗ್ರೆಸ್ ಸಹ ಪತ್ರಕರ್ತರಿಗೆ ಲಂಚ ನೀಡಲು ಮುಂದಾಗಿತ್ತು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರ್ಜೆವಾಲ, ‘ಕಾಂಗ್ರೆಸ್ ಯಾವುದೇ ಪತ್ರಕರ್ತರಿಗೆ ಆಮಿಷ ಒಡ್ಡಿಲ್ಲ. ಇಂತಹ ಚಟುವಟಿಕೆಗಳಿಗೆ ಪಕ್ಷ ಯಾವತ್ತೂ ಬೆಂಬಲ ನೀಡುವುದಿಲ್ಲ’ ಎಂದರು.
ಮೂರ್ಖರಾಗಿಸಲು ಯತ್ನ: ‘ಪರಿಶಿಷ್ಟರ ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕರ್ನಾಟಕದ ಜನರನ್ನು ಮೂರ್ಖರನ್ನಾಗಿಸಲು ಬಿಜೆಪಿ ಹೊರಟಿದೆ’ ಎಂದು ಸುರ್ಜೆವಾಲ ಆರೋಪಿಸಿದರು.
‘ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಸರ್ಕಾರಿ ಆದೇಶದ ಮೂಲಕವೇ ಪರಿಶಿಷ್ಟರಿಗೆ ಮೀಸಲಾತಿ ನೀಡಲು ಅವಕಾಶ ಇತ್ತು. ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಕೇಂದ್ರಕ್ಕೆ ಒತ್ತಡ ತರಬೇಕಿತ್ತು. ಈ ವಿಷಯದಲ್ಲಿ ಸಂವಿಧಾನ ತಿದ್ದುಪಡಿ ಪರ ಕಾಂಗ್ರೆಸ್ ಮತ ಚಲಾಯಿಸಲಿದೆ. ಪಂಚಮಸಾಲಿ ಸಮುದಾಯದ ಮೀಸಲಾತಿ ವಿಚಾರ ದಲ್ಲಿ ಸರ್ಕಾರ ಮೊದಲು ನಿರ್ಧಾರ ಪ್ರಕಟಿ ಸಲಿ. ಈ ವಿಷಯದಲ್ಲಿಮೀನಮೇಷ ಎಣಿಸುವುದು ಸರಿಯಲ್ಲ’ ಎಂದರು.
ಬೆಂಗಳೂರಿನಲ್ಲೇ ಸುರ್ಜೆವಾಲ ವಾಸ
ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಚಟುವಟಿಕೆಗಳಿಗೆ ಇನ್ನಷ್ಟು ಚುರುಕು ಮುಟ್ಟಿಸಲುನವೆಂಬರ್ ತಿಂಗಳಿನಿಂದ ಬೆಂಗಳೂರಿನಲ್ಲಿ ನೆಲೆಸಲು ರಣದೀಪ್ ಸಿಂಗ್ ಸುರ್ಜೆವಾಲ ತೀರ್ಮಾನಿಸಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ 40 ದಿನಗಳ ಕಾಲ ಪಾಲ್ಗೊಂಡಿದ್ದ ಸುರ್ಜೆವಾಲ, ಒಂದು ವಾರ ರಾಷ್ಟ್ರ ರಾಜಧಾನಿಯಲ್ಲಿ ಇರಲಿದ್ದಾರೆ. ಬಳಿಕ ಬೆಂಗಳೂರಿಗೆ ತೆರಳಲಿದ್ದಾರೆ. ಬೆಂಗಳೂರಿನಲ್ಲಿ ಕಬ್ಬನ್ ಉದ್ಯಾನದ ಸಮೀಪ ಎರಡು ಬೆಡ್ ರೂಂಗಳ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ. ತಿಂಗಳಿನ ಬಹುತೇಕ ದಿನ ಅಲ್ಲಿ ಇರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.