ADVERTISEMENT

ಅತಿಥಿ ಉಪನ್ಯಾಸಕರ ಸಕ್ರಮಾತಿಗೆ ಕಾನೂನು ತೊಡಕು: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 20:02 IST
Last Updated 8 ಜನವರಿ 2022, 20:02 IST
ಡಾ.ಸಿ.ಎನ್.‌ ಅಶ್ವತ್ಥನಾರಾಯಣ
ಡಾ.ಸಿ.ಎನ್.‌ ಅಶ್ವತ್ಥನಾರಾಯಣ   

ಬೆಂಗಳೂರು: ತಾತ್ಕಾಲಿಕ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಸಕ್ರಮಗೊಳಿಸಿದರೆ, ಈ ಹಿಂದೆ ವಿವಿಧ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಕರ್ನಾಟಕ ಆಡಳಿತ ನ್ಯಾಯಮಂಡಳಿ ವ್ಯಕ್ತಪಡಿಸಿರುವ ನಿಲುವಿನಂತೆ ಕಾನೂನು ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗುತ್ತದೆ ಎನ್ನುತ್ತಾರೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ.

‘ಉಮಾದೇವಿ ವಿರುದ್ಧ ಕರ್ನಾಟಕ ಸರ್ಕಾರ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠವು 2006 ಏ. 10ರಂದು ನೀಡಿದ ತೀರ್ಪಿನಲ್ಲಿ, ‘ನೇಮಕಾತಿ ನಿಯಮಗಳಂತೆ ನೇಮಕ ಆಗದಿರುವ ವ್ಯಕ್ತಿಗಳಿಗೆ ಸಕ್ರಮಾತಿಯ ಹಕ್ಕು ದೊರೆಯುವುದಿಲ್ಲ. ಇಂಥ ನಿಯಮಬಾಹಿರ ನೇಮಕಾತಿಯನ್ನು ಸಕ್ರಮಗೊಳಿಸಬಾರದು’ ಎಂದು ತೀರ್ಪು ನೀಡಿದೆ ಎನ್ನುತ್ತಾರೆ ಅವರು.

‘ಅಲ್ಲದೆ, ಅತಿಥಿ ಉಪನ್ಯಾಸಕರ ಸೇವೆಯನ್ನು ಸಕ್ರಮಗೊಳಿಸುವಂತೆ ಕೋರಿ ವೀರಣ್ಣ ಎಸ್‌. ಸಜ್ಜನರ್‌ ಮತ್ತು ಇತರರು (2012), ಕೆ.ಆರ್‌. ವಿಶ್ವಕುಮಾರ್‌ ಮತ್ತು ಇತರರು (2014), ಜಯಚಂದ್ರ ಕೆ.ಇ ಮತ್ತು ಇತರರು (2017), ಇತ್ತೀಚಿನ ಸಕಲೇಶ್‌ ಎಚ್‌.ಜಿ. ಮತ್ತು ಇತರರು (2020) ಸಲ್ಲಿಸಿದ್ದ ಅರ್ಜಿಯನ್ನು ಉಮಾದೇವಿ ಪ್ರಕರಣದ ತೀರ್ಪು ಹಾಗೂ ಸೇವಾ ಅವಧಿ ಆಧರಿಸಿ ತಾತ್ಕಾಲಿಕ ನೌಕರರನ್ನು ಸಕ್ರಮ ಮಾಡಲು ಪರಿಗಣಿಸಲು ಅರ್ಹರಾಗಿರುವುದಿಲ್ಲವೆಂಬ ನಿಲುವು ಆಧರಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ವಜಾಗೊಳಿಸಿದೆ’

ADVERTISEMENT

1,242 ಹುದ್ದೆಗಳ ಭರ್ತಿಗೆ ಕೆಇಎ ಮೂಲಕ ಪ್ರಕ್ರಿಯೆ ನಡೆಯುತ್ತಿದೆ. ಕಾರ್ಯಭಾರವನ್ನು ಕಾಯಂ ಉಪನ್ಯಾಸಕರಿಗೆ ಹಂಚಿದ ಬಳಿಕ ಉಳಿದ ಕಾರ್ಯಭಾರವನ್ನು ನಿರ್ವಹಿಸಲು ಅತಿಥಿ ಉಪನ್ಯಾಸಕರನ್ನು ನೇಮಿಸಲಾಗುತ್ತಿದೆ. ಅತಿಥಿ ಉಪನ್ಯಾಸಕರನ್ನು ನೇಮಕಾತಿ ನಿಯಮಗಳ ಅನ್ವಯ ಹಾಗೂ ಪೂರ್ಣಕಾಲಿಕ ಕಾರ್ಯಭಾರಕ್ಕೆ ನೇಮಿಸಿಕೊಳ್ಳುವುದಿಲ್ಲ. ತಾತ್ಕಾಲಿಕವಾಗಿ ಗರಿಷ್ಠ 8–10 ಗಂಟೆಯ ಕಾರ್ಯಭಾರಕ್ಕೆ ಮಾತ್ರ ನೇಮಿಸಿಕೊಳ್ಳುವುದರಿಂದ ಅವರಿಗೆ ಯುಜಿಸಿ ನಿಯಮಗಳ ಅನ್ವಯ ವೇತನ ಪಾವತಿಸಲು ಅವಕಾಶ ಇಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.