ಮಂಗಳೂರು: ಮೀನುಗಾರರು ಪ್ರತಿ ವರ್ಷ ಮೀನುಗಾರಿಕೆ ಋತುವನ್ನು ಆರಂಭಿಸುವ ಮೊದಲು ಸಮುದ್ರಕ್ಕೆ ಹಾಲನ್ನು ಸುರಿದು, ಪ್ರಾರ್ಥನೆ ಸಲ್ಲಿಸುತ್ತಾರೆ. ಅದೇ ರೀತಿ ಕಡಲ್ಕೊರೆತದ ಸಂದರ್ಭದಲ್ಲಿ ಸರ್ಕಾರಗಳೂ ಕಡಲಿಗೆ ಅನುದಾನದ ಹೊಳೆಯನ್ನೇ ಹರಿಸುತ್ತಿವೆ. ಆದರೂ ಕಡಲಿನ ಆರ್ಭಟದಿಂದ ಮಾತ್ರ ತೀರದ ಜನರಿಗೆ ಮುಕ್ತಿ ಸಿಕ್ಕಿಲ್ಲ.
ಪ್ರತಿ ವರ್ಷ ಕರಾವಳಿ ಕಡಲ ತೀರಕ್ಕೆ ಕಲ್ಲು ಹಾಕುವುದು, ಕಿತ್ತುಹೋದ ತಡೆಗೋಡೆಗೆ ತೇಪೆ ಹಾಕುವುದಕ್ಕಷ್ಟೇ ಸೀಮಿತವಾಗಿವೆ ಕಾಮಗಾರಿಗಳು. ಅದರಲ್ಲೂ ಕೆಲವೇ ಕಾಮಗಾರಿಗಳು ಹೊರತುಪಡಿಸಿದರೆ, ಕರಾವಳಿಯಲ್ಲಿ ನಡೆಯುವ ಬಹುಪಾಲು ಕಡಲ್ಕೊರೆತ ಕಾಮಗಾರಿಗಳು ಅಕ್ರಮವಾಗಿವೆ ಎನ್ನುವ ಮಾತುಗಳು ವಿಜ್ಞಾನಿಗಳ ವಲಯದಿಂದ ಕೇಳಿ ಬರುತ್ತಿವೆ.
ಇದನ್ನೂ ಓದಿ:ಒಳನೋಟ| ಪ್ರತಿವರ್ಷ ಕಡಲಿಗೆ ಕಲ್ಲು..!
ಕರಾವಳಿ ನಿಯಂತ್ರಣ ವಲಯ (ಸಿಆರ್‌ಜೆಡ್) ಅನುಮತಿ ಇಲ್ಲದೆಯೇ ಉಳ್ಳಾಲ, ಸೋಮೇಶ್ವರ, ಉಚ್ಚಿಲ, ಸಸಿಹಿತ್ಲು, ಮುಂಡ ಮತ್ತಿತರ ಪ್ರದೇಶಗಳ ಪರಿಸರದಲ್ಲಿ ಕೋಟ್ಯಂತರ ವೆಚ್ಚದಲ್ಲಿ ಕಡಲ್ಕೊರೆತ ತಡೆಗೋಡೆ ಕಾಮಗಾರಿ ಮಾಡಲಾಗುತ್ತಿದೆ. ಕಾಮಗಾರಿ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಸಣ್ಣ ನೀರಾವರಿ ಇಲಾಖೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗಳೇ ಸರ್ಕಾರದ ನಿಯಮ ಉಲ್ಲಂಘಿಸುತ್ತಿವೆ.
ಸಣ್ಣ ನೀರಾವರಿ ಇಲಾಖೆಯಿಂದ ಸುಲ್ತಾನ್ ಬತ್ತೇರಿ ಸಮೀಪ ಕಾಂಡ್ಲವನ ನಾಶಗೊಳಿಸುವ ರೀತಿ ತಡೆಗೋಡೆ ನಿರ್ಮಿಸುವ ಕಾಮಗಾರಿಯನ್ನು ಇತ್ತೀಚೆಗೆ ಪರಿಸರ ಇಲಾಖೆ ಅಧಿಕಾರಿಗಳೇ ನಿಲ್ಲಿಸಿದ್ದಾರೆ. ಉಳ್ಳಾಲ ನಗರಸಭೆ ಕೂಡ ಸಿಆರ್‌ಜೆಡ್ ಅನುಮತಿ ಇಲ್ಲದೆಯೇ ಸಮುದ್ರ ತೀರದಲ್ಲಿ ವಸತಿ ನಿರ್ಮಿಸಲು ನಿರಾಕ್ಷೇಪಣಾ ಪತ್ರ ಒದಗಿಸುತ್ತಿದೆ.
ಇದನ್ನೂ ಓದಿ:ಒಳನೋಟ| ಅಲೆಗಳ ಉಬ್ಬರ ತಡೆದರೆ ಕಡಲ್ಕೊರೆತ ನಿವಾರಣೆ
ಕೊನೆಯ ಅಸ್ತ್ರ ತಡಗೋಡೆ: ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯೇ ಸ್ಪಷ್ಟವಾಗಿ ಸೂಚಿಸಿರುವಂತೆ ಸಮುದ್ರ ಕೊರೆತ ತಡೆಯಲು ತಡೆಗೋಡೆ ಪರಿಹಾರವಲ್ಲ. ಇಲಾಖೆಯು ಕಡಲ್ಕೊರೆತ ತಡೆಯಲು ಕೈಗೊಳ್ಳಬಹುದಾದ 12 ಕ್ರಮಗಳನ್ನು ಸೂಚಿಸಿದ್ದು, ಅದರಲ್ಲಿ ಕೊನೆಯ 12ನೇ ಆಯ್ಕೆಯಾಗಿ ಅನಿವಾರ್ಯ ಸಂದರ್ಭದಲ್ಲಿ ಸೂಕ್ತ ಸಮರ್ಥನೆ ನೀಡಿ ತಡೆಗೋಡೆ ನಿರ್ಮಿಸಬಹುದು ಎಂದು ತಿಳಿಸಿದೆ. ಆದರೆ ಈ ಭಾಗದಲ್ಲಿ ವರ್ಷಂಪ್ರತಿ ಸಮುದ್ರಕ್ಕೆ ತಡೆಗೋಡೆ, ಪರಿಹಾರ ಹಾಗೂ ಪುನರ್ವಸತಿ ಹೆಸರಿನಲ್ಲಿ ಕೋಟ್ಯಂತರ ಅನುದಾನವನ್ನು ಸರ್ಕಾರ ವ್ಯಯಿಸುತ್ತಿದೆ. ಸಮುದ್ರಕ್ಕೆ ಹಾಕಿದ ಕಲ್ಲುಗಳಿಗೆ ಲೆಕ್ಕವೇ ಇಲ್ಲದಂತಾಗಿದೆ.
ಇದನ್ನೂ ಓದಿ:ಒಳನೋಟ| ‘ತೀರ’ದ ಬವಣೆ...
₹ 300 ಕೋಟಿ ಸಮುದ್ರದ ಪಾಲು
ಎರಡು ದಶಕಗಳಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಡಲ್ಕೊರೆತ ತಡೆಗಾಗಿ ₹ 300 ಕೋಟಿಗೂ ಹೆಚ್ಚು ವ್ಯಯವಾಗಿದೆ. ಆದರೆ ದೀರ್ಘಕಾಲಿಕ ಮತ್ತು ದೊಡ್ಡ ಮೊತ್ತದ ಕಾಮಗಾರಿಗಳು ನಡೆದಿರುವುದು ಬೆರಳೆಣಿಕೆಯಷ್ಟು ಮಾತ್ರ. ಮಳೆಗಾಲ ಬಂದಾಗಲೆಲ್ಲ ಬಂಡೆಕಲ್ಲು ಅಥವಾ ಮರಳು ಚೀಲಗಳನ್ನು ಹಾಕುವ ಸಣ್ಣ ಪುಟ್ಟ ಕಾಮಗಾರಿಗಳು ನಡೆಯುತ್ತಲೇ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.