ADVERTISEMENT

ಕಡಲಿನಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ಕೋಸ್ಟ್‌ ಗಾರ್ಡ್‌ ಶಕ್ತಿ ಪ್ರದರ್ಶನ

ಅರಬ್ಬಿ ಸಮುದ್ರದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ಅಣಕು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 19:45 IST
Last Updated 2 ಫೆಬ್ರುವರಿ 2023, 19:45 IST
ಸಮುದ್ರದ ನಡುವೆ ದೋಣಿಗೆ ‌ಬೆಂಕಿ ಹೊತ್ತಿಕೊಂಡಿದ್ದನ್ನು ನಂದಿಸುವ ಅಣಕು ಕಾರ್ಯಾಚರಣೆಯನ್ನು ಮಂಗಳೂರಿನ ಕರಾವಳಿ ರಕ್ಷಣಾ ಪಡೆಯು ಗುರುವಾರ ಅರಬ್ಬಿಸಮುದ್ರದಲ್ಲಿ ಪ್ರದರ್ಶಿಸಿತು - ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಸಮುದ್ರದ ನಡುವೆ ದೋಣಿಗೆ ‌ಬೆಂಕಿ ಹೊತ್ತಿಕೊಂಡಿದ್ದನ್ನು ನಂದಿಸುವ ಅಣಕು ಕಾರ್ಯಾಚರಣೆಯನ್ನು ಮಂಗಳೂರಿನ ಕರಾವಳಿ ರಕ್ಷಣಾ ಪಡೆಯು ಗುರುವಾರ ಅರಬ್ಬಿಸಮುದ್ರದಲ್ಲಿ ಪ್ರದರ್ಶಿಸಿತು - ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್   

ಮಂಗಳೂರು: ಕಡಲಿನಲ್ಲಿ ನಡೆಯುವ ದಾಳಿಗಳನ್ನು ಹಿಮ್ಮೆಟ್ಟಿಸುವುದು ಹೇಗೆ, ಅಪಾಯಕ್ಕೆ ಸಿಲುಕಿದ ಹಡಗನ್ನು ರಕ್ಷಿಸುವುದೆಂತು' ಸಮುದ್ರಪಾಲಾದವರನ್ನು ಹೆಲಿಕಾಪ್ಟರ್‌ ನೆರವಿನಿಂದ ಕಾಪಾಡುವುದೆಂತು, ಮೀನುಗಾರಿಕಾ ದೋಣಿಗಳಿಗೆ ಬೆಂಕಿ ಬಿದ್ದರೆ ಅದನ್ನು ಹೇಗೆ ನಂದಿಸಲಾಗುತ್ತದೆ, ಕಡಲ ಕಣ್ಗಾವಲು ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ....

ಕರಾವಳಿ ರಕ್ಷಣೆy 47 ನೇ ದಿನಾಚರಣೆಯ ಅಂಗವಾಗಿ ಕರಾವಳಿ ರಕ್ಷಣಾ ಪಡೆಯ (ಕೋಸ್ಟ್‌ ಗಾರ್ಡ್‌) ಕೇಂದ್ರ ಕಚೇರಿ ಜಿಲ್ಲೆ–3ರ ಸಿಬ್ಬಂದಿ ಇಂತಹ ಹಲವು ಅಣಕು ಕಾರ್ಯಾಚರಣೆಗಳನ್ನು ಅರಬ್ಬಿ ಸಮುದ್ರದಲ್ಲಿ ರಾಜ್ಯಪಾಲ ಥಾವರ ಚಂದ್‌ ಗೆಹಲೋತ್‌ ಸಮ್ಮುಖದಲ್ಲಿ ಗುರುವಾರ ಪ್ರಸ್ತುತಪಡಿಸಿದರು. ಸುಮಾರು 45 ಕಿ.ಮೀ ದೂರದವರೆಗೆ ಹಡಗಿನಲ್ಲಿ ಪ್ರಯಾಣ ಬೆಳೆಸಿದ ರಾಜ್ಯಪಾ‌ಲರು ಕಡಲಿನಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಗಳನ್ನು ವೀಕ್ಷಿಸಿದರು.

ದೇಶದ ಸಮುದ್ರ ತೀರವನ್ನು ದಾಳಿಕೋರರು ಅಕ್ರಮವಾಗಿ ಪ್ರವೇಶಿಸಿದ ಬಗ್ಗೆ ಡಾರ್ನಿಯರ್‌ ವಿಮಾನ ಸಂದೇಶ ರವಾನಿಸಿತು. ಕಡಲ ದಾಳಿಕೋರರು ಕರಾವಳಿ ರಕ್ಷಣಾ ಪಡೆಯ ಕಸ್ತೂರಬಾ ಗಾಂಧಿ ಹಡಗಿಗೆ ಗುಂಡು ಹಾರಿಸಿದರು. ತಕ್ಷಣವೇ ವರಾಹ ಹಡಗಿನಿಂದ ಎರಡು ಇಂಟರ್‌ಸೆಪ್ಟರ್‌ ಬೋಟ್‌ಗಳನ್ನು ಸಮುದ್ರಕ್ಕಿಳಿಸಲಾಯಿತು. ಎರಡು ಅತ್ಯಾಧುನಿಕ ಲಘು ಹೆಲಿಕಾಪ್ಟರ್‌ಗಳನ್ನು (ಎಎಲ್‌ಎಚ್‌) ಸ್ಥಳಕ್ಕೆ ಕಳುಹಿಸಲಾಯಿತು. ದಾಳಿಕೋರರಿದ್ದ ಹಡಗನ್ನು ಎರಡು ಇಂಟರ್‌ಸೆಪ್ಟರ್‌ ಬೋಟ್‌ಗಳು ಸುತ್ತುವರಿದರೆ, ಶಸ್ತ್ರಸನ್ನದ್ಧ ಹೆಲಿಕಾಪ್ಟರ್‌ಗಳು ಅದರ ಮೇಲೆ ಹಾರಾಡಿದವು. ಸ್ಥಳಕ್ಕೆ ಧಾವಿಸಿದ ರಾಜದೂತ್ ಹಡಗಿನಿಂದ ದಾಳಿಕೋರರಿದ್ದ ನೌಕೆಯತ್ತ ಗುಂಡು ಹಾರಿಸಿ ಎಚ್ಚರಿಕೆ ನೀಡಲಾಯಿತು. ಸಚೆತ್‌ ಹಡಗಿನಲ್ಲಿದ್ದ ನಾವೀಕರು ನೌಕೆಯನ್ನು ತಲುಪಿ, ಅದರಲ್ಲಿದ್ದ ದಾಳಿಕೋರರನ್ನು ಬಂಧಿಸಿದರು. ಈ ಅಣಕು ಕಾರ್ಯಾಚರಣೆ ಮೈನವಿರೇಳಿಸುವಂತಿತ್ತು.

ADVERTISEMENT

ಕರಾವಳಿ ರಕ್ಷಣಾ ಪಡೆಯ ವರಾಹ, ಸಚೆತ್, ಕಸ್ತೂರಬಾ ಗಾಂಧಿ, ರಾಜದೂತ್‌ ಹಡಗುಗಳು, ಚಾರ್ಲಿ 420, ಚಾರ್ಲಿ 448, ಚಾರ್ಲಿ 155 ನೌಕೆಗಳು, ಎರಡು ಡಾರ್ನಿಯರ್‌ ವಿಮಾನಗಳು ಹಾಗೂ ಎರಡು ಎಲ್ಎಎಚ್‌ ಹೆಲಿಕಾಪ್ಟರ್‌ಗಳು ಅಣಕು ಕಾರ್ಯಾಚರಣೆಯಲ್ಲಿ ಭಾಗಿಯಾದವು.

ಕರಾವಳಿ ರಕ್ಷಣಾ ಪಡೆಯ ಕರ್ನಾಟಕದ ಕಮಾಂಡರ್‌ ಡಿಐಜಿ ಪ್ರವೀಣ್ ಕುಮಾರ್ ಮಿಶ್ರಾ ಅವರ ಜೊತೆ ರಾಜ್ಯಪಾಲರು ಕಡಲ ಭದ್ರತೆಗೆ ಸಂಬಂಧಿಸಿದ ವಿವಿಧ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.