ADVERTISEMENT

ತೆಂಗು, ಅಡಿಕೆಗೆ ರುಗೋಸ್ ಸುರುಳಿ ರೋಗ

ಶ್ಯಾಗಲೆ, ಅಣಬೇರು ಭಾಗಗಳಲ್ಲಿ ಕಾಣಿಸಿಕೊಂಡಿರುವ ಕೀಟಗಳು: ಆತಂಕದಲ್ಲಿ ರೈತರು

ಡಿ.ಕೆ.ಬಸವರಾಜು
Published 10 ಡಿಸೆಂಬರ್ 2019, 20:01 IST
Last Updated 10 ಡಿಸೆಂಬರ್ 2019, 20:01 IST
ಶ್ಯಾಗಲೆ ಬಳಿ ಅಡಿಕೆ ತೋಟದಲ್ಲಿ ಕಾಣಿಸಿಕೊಂಡ ರೋಗ
ಶ್ಯಾಗಲೆ ಬಳಿ ಅಡಿಕೆ ತೋಟದಲ್ಲಿ ಕಾಣಿಸಿಕೊಂಡ ರೋಗ   

ದಾವಣಗೆರೆ: ತಾಲ್ಲೂಕಿನ ಶ್ಯಾಗಲೆ, ಅಣಬೇರು ಹಾಗೂ ಹರಿಹರ ತಾಲ್ಲೂಕಿನ ಹಲವು ಭಾಗಗಳಲ್ಲಿ ತೆಂಗು ಮತ್ತು ಅಡಿಕೆ ತೋಟಗಳಿಗೆ ರುಗೋಸ್ ಸುರುಳಿ ಬಿಳಿ ನೊಣದ ಬಾಧೆ ಕಂಡುಬಂದಿದೆ.

ಈ ಕೀಟವು ತಮಿಳುನಾಡಿನ ಪೊಲ್ಲಾಚ್ಚಿ ಮತ್ತು ಕೇರಳದ ಪಾಲಕ್ಕಾಡ್‌ನಿಂದ ಬಂದಿದೆ. ತೆಂಗು ಬೆಳೆ ಅಲ್ಲದೇ 200 ಬಗೆಯ ಗಿಡಗಳಲ್ಲಿ ಇದು ಆಶ್ರಯ ಪಡೆಯಬಲ್ಲದು. ಇತ್ತೀಚಿನ ವರ್ಷಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣವಲ್ಲದೇ ಕರ್ನಾಟಕದ ದಾವಣಗೆರೆ ಹಾಗೂ ಶಿವಮೊಗ್ಗದ ಕೆಲವು ಭಾಗಗಳಲ್ಲಿ ಆವರಿಸಿರುವುದು ರೈತರು ಕಂಗಾಲಾಗುವಂತೆ ಮಾಡಿದೆ.

‘ಎರಡು ಎಕರೆ ತೋಟದಲ್ಲಿ ಅಡಿಕೆ ಬೆಳೆದಿದ್ದು, ಎಲೆಯ ಕೆಳಭಾಗದಲ್ಲಿ ಕೀಟ ಕಂಡುಬಂದಿದೆ. ಬೆಳೆ ಎಲ್ಲಾ ನಷ್ಟವಾಗಿದೆ. ತೋಟಗಾರಿಕೆ ಇಲಾಖೆಯವರು ಔಷಧ ನೀಡಿದ್ದು, ಅದನ್ನು ಸಿಂಪಡಿಸುತ್ತಿದ್ದೇನೆ’ ಎನ್ನುತ್ತಾರೆ ಶ್ಯಾಗಲೆ ರೈತ ಲಕ್ಷ್ಮೀಕಾಂತ್.

ADVERTISEMENT

‘ತೆಂಗಿನ ಗರಿಗಳ ಕೆಳಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸವನ್ನು ಹೀರುವುದರಿಂದ ಜೇನುಗರೆದಂತೆ ಕೆಳಭಾಗದ ಎಲೆಗಳ ಮೇಲೆ ಸಿಹಿದ್ರವವು ವ್ಯಾಪಿಸುತ್ತದೆ. ಇದರಿಂದಾಗಿ ರೋಗವು ಹರಡಿ ಎಲೆಗಳು ವಿಕಾರವಾಗುತ್ತವೆ. ಕೀಟಗಳು ಉತ್ಪಾದಿಸುವ ಬಿಳಿಯ ಅಂಟಿನಂತಹ ಪುಡಿ ರೈತರಿಗೆ ಕಿರಿಕಿರಿ ಉಂಟುಮಾಡುತ್ತದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ವಿಷಯತಜ್ಞೆ ಅಪೂರ್ವ.

‘ಪ್ರಾಥಮಿಕ ಹಂತದಲ್ಲಿ ಕೀಟಬಾಧೆ ಅಷ್ಟೇನೂ ಹಾನಿಕಾರಕವಲ್ಲ. ಹುಳುಗಳ ಸಂಖ್ಯೆ ಹೆಚ್ಚಾದಾಗ ಸಮಸ್ಯೆ ಉಲ್ಬಣಿಸುತ್ತದೆ. ಹಳೆಯ ಗರಿಗಳನ್ನು ತಿಂದು ನಾಶಮಾಡುತ್ತವೆ. ಸುಳಿ ಗರಿಗಳಿಗೆ ಹೆಚ್ಚಿನ ಹಾನಿಯಾಗುವುದಿಲ್ಲ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ’ ಎಂದು ಅವರು ಮಾಹಿತಿ ನೀಡಿದರು.

‘ತೆಂಗು ಬೆಳೆಯುವ ಪ್ರದೇಶದಲ್ಲಿ ಸೀಬೆ, ಬಾಳೆ, ಸೀತಾಫಲ, ಮಾವು, ಲವಂಗ, ಕೆಸವೆ, ಕರಿಬೇವು, ಹಲಸು ಮುಂತಾದ ಬೆಳೆಗಳಲ್ಲಿ ಈ ಕೀಟ ಕಂಡುಬಂದರೂ ತೆಂಗು ಬೆಳೆಯನ್ನೇ ಗುರಿಯಾಗಿಸಿ ಬಾಧಿಸುತ್ತಿದೆ’ ಎನ್ನುತ್ತಾರೆ ಅವರು.

ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾದಾಗ ಮತ್ತು ತೇವಾಂಶ ಕಡಿಮೆಯಾದಾಗ ಈ ಕೀಟವು ವೃದ್ಧಿಸುತ್ತದೆ. ಮುಂಗಾರು ಮಳೆ ಕೊರತೆಯಾದಾಗ ಈ ಕೀಟದ ಹಾವಳಿ ಹೆಚ್ಚು. ಮಳೆಗಾಲದಲ್ಲಿ ಇದರ ತೀವ್ರತೆ ಕಡಿಮೆ.

ನಿಯಂತ್ರಣ ಕ್ರಮಗಳು

–ಕೀಟಬಾಧೆಗೆ ಒಳಗಾದ ಗಿಡಗಳ ಎಲೆಯನ್ನು ಕತ್ತರಿಸಬೇಕು.

–ಕೀಟ ಹರಡಿರುವ ಪ್ರದೇಶಗಳಿಂದ ತೆಂಗಿನ ಸಸಿಗಳು, ಗರಿಗಳನ್ನು ಸಾಗಿಸುವ ಮುನ್ನ ಸಂಪೂರ್ಣವಾಗಿ ಪರಿಶೀಲಿಸಬೇಕು.

–ಹಳದಿ ಬಣ್ಣದ ಅಂಟು ಬಲೆಗಳನ್ನು ಮರಗಳ ಕಾಂಡಗಳ ಮೇಲೆ ಅಳವಡಿಸುವ ಮೂಲಕ ವಯಸ್ಕ ಬಿಳಿ ನೊಣಗಳನ್ನು ನಿಯಂತ್ರಿಸಬಹುದು. ಹಳದಿ ಡ್ರಾಯಿಂಗ್ ಮೇಪರ್‌ಗೆ ಹರಳೆಣ್ಣೆ, ಲೇಪಿಸಿ ಬಳಸಬಹುದು. ಹಳದಿ ಬಣ್ಣವು ಕೀಟಗಳನ್ನು ಆಕರ್ಷಿಸುವುವುದರಿಂದ ಕೀಟಗಳು ಬಲೆಗೆ ಅಂಟಿಕೊಳ್ಳುತ್ತವೆ.

–ಶೇ 1ರ ಪಿಷ್ಟ (ಸ್ಟಾರ್ಚ್‌) ದ್ರಾವಣವನ್ನು ಎಲೆಗಳ ಮೇಲೆ ಸಿಂಪಡಿಸುವುದರಿಂದ ಕಾಡಿಗೆ ರೋಗವನ್ನು ನಿಯಂತ್ರಿಸಬಹುದು. ಬಿಳಿ ನೊಣದ ಬಾಧೆ ತೀವ್ರವಾದಲ್ಲಿ ಶೇ 5 ಮಿಲೀ ಬೇವಿನ ಎಣ್ಣೆಯ ದ್ರಾವಣವನ್ನು ಸಿಂಪಡಿಸಬಹುದು.

***

‘ದಾವಣಗೆರೆ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಕೀಟದ ಭಾದೆ ಕಂಡು ಬಂದಿದೆ. ವಿಷಯ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಕೆಲಸ ಮಾಡುತ್ತಿದ್ದಾರೆ.ಆರಂಭಿಕ ಹಂತಲ್ಲಿಯೇ ನಿರ್ವಹಣಾ ಕ್ರಮ ಕೈಗೊಂಡರೆ ಕೀಟವು ಹರಡದಂತೆ ಹಾಗೂ ಹಾವಳಿಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು’
–ಅಪೂರ್ವ, ವಿಷಯ ತಜ್ಞೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.