ADVERTISEMENT

ಕಾಫಿ ದರ ಇಳಿಕೆ ‘ಬರೆ’: ಬೆಳೆಗಾರರಿಗೆ ಆಘಾತ

ಅಕಾಲಿಕ ಮಳೆ ಸಂಕಷ್ಟದ ನಡುವೆ ಬೆಳೆಗಾರರಿಗೆ ಆಘಾತ

ಆದಿತ್ಯ ಕೆ.ಎ
Published 25 ನವೆಂಬರ್ 2022, 20:15 IST
Last Updated 25 ನವೆಂಬರ್ 2022, 20:15 IST
ಹಣ್ಣಾದ ಕಾಫಿ (ಸಾಂದರ್ಭಿಕ ಚಿತ್ರ)
ಹಣ್ಣಾದ ಕಾಫಿ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಹವಾಮಾನ ವೈಪರೀತ್ಯ ಹಾಗೂ ಕಾರ್ಮಿಕರ ಕೊರತೆಯ ಸಂಕಷ್ಟ ಎದುರಿಸುತ್ತಿರುವ ಕಾಫಿ ಬೆಳೆಗಾರರಿಗೆ ದರ ಇಳಿಕೆಯ ಬರೆ ಬಿದ್ದಿದೆ. ಕಾಫಿ ಫಸಲು ಕೊಯ್ಲಿಗೆ ಬಂದಾಗಲೇ ದರ ಇಳಿದಿರುವುದು ಬೆಳೆಗಾರರಿಗೆ ಆಘಾತ ತಂದಿದೆ.

ಜುಲೈ ಹಾಗೂ ಆಗಸ್ಟ್‌ ತಿಂಗಳಲ್ಲಿ ಅರೇಬಿಕಾ ಕಾಫಿ ಪಾರ್ಚ್‌ಮೆಂಟ್‌ನ 50 ಕೆ.ಜಿ ಚೀಲಕ್ಕೆ ₹ 17 ಸಾವಿರ ಬೆಲೆಯಿತ್ತು. ಈಗ ಅಷ್ಟೇ ತೂಕದ ಅರೇಬಿಕಾ ಕಾಫಿ ಬೆಲೆಯು ಇದೀಗ ₹ 13,200ಕ್ಕೆ ಕುಸಿದಿದೆ.

ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಕಾಫಿ ಕೊಯ್ಲು ಆರಂಭವಾಗಿದೆ. ಬೆಳೆಗಾರರು ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಿ ಮಾರುವ ಸಿದ್ಧತೆಯಲ್ಲಿದ್ದರು. ಈಗ ಬೆಲೆ ಇಳಿಕೆಯಿಂದ ಕಂಗಾಲಾಗಿದ್ದಾರೆ.

ADVERTISEMENT

ಕಾಫಿ ಬೆಳೆಯುವ ರಾಷ್ಟ್ರಗಳಲ್ಲಿ ಕಾಫಿ ಬೆಳೆ ನೆಲಕಚ್ಚಿದ್ದರಿಂದ ಕೆಲವೇ ತಿಂಗಳ ಹಿಂದೆ ಬೆಲೆ ಗರಿಷ್ಠಮಟ್ಟಕ್ಕೆ ತಲುಪಿತ್ತು. ವಾರ್ಷಿಕ ವಹಿವಾಟು ಹೆಚ್ಚಿತ್ತು. ಈ ಬಾರಿ ವಿಪರೀತ ಮಳೆಯಿಂದ ಬಹುತೇಕ ಕಡೆ ಫಸಲು ಉದುರಿದೆ. ಹಿಂದಿನಷ್ಟು ವಹಿವಾಟು ನಿರೀಕ್ಷಿಸುವಂತಿಲ್ಲ ಎಂದು ಕಾಫಿ ಮಂಡಳಿ ಅಧಿಕಾರಿಗಳು ಹೇಳುತ್ತಾರೆ.

ಕಾಫಿ ರಫ್ತು ಪ್ರಮಾಣ ಏರಿದ್ದರಿಂದಾಗಿ ಕೆಲ ತಿಂಗಳ ಹಿಂದೆ ರೊಬಸ್ಟಾದ ಪಾರ್ಚ್‌ಮೆಂಟ್‌ನ ಬೆಲೆ ₹ 10 ಸಾವಿರದ ಗಡಿದಾಟಿತ್ತು. ಈಗ ರೊಬಸ್ಟಾ ಪಾರ್ಚ್‌ಮೆಂಟ್‌, ಚೆರಿ ಮಾದರಿ ಕಾಫಿ ದರವೂ ಇಳಿಕೆಯಾಗಿದೆ. ಡಿಸೆಂಬರ್‌ ವೇಳೆಗೆ ಮತ್ತಷ್ಟು ಕುಸಿಯಲಿದೆ ಎಂದು ಖರೀದಿದಾರರು ಹೆದರಿಸುತ್ತಿದ್ದಾರೆ ಎನ್ನುತ್ತಾರೆ ಬೆಳೆಗಾರರು.

ಕಾಫಿ ಬೆಳೆಯುವ ಪ್ರದೇಶದಲ್ಲಿ ನವೆಂಬರ್‌ನಲ್ಲೂ ಅಕಾಲಿಕ ಮಳೆ ಸುರಿಯುತ್ತಿದ್ದು ಕಾಫಿ ಕೊಯ್ಲಿಗೆ ಅಡ್ಡಿಯಾಗುತ್ತಿದೆ. ಹಣ್ಣಾಗಿರುವ ಕಾಫಿ ಒಡೆದು ನೆಲಕ್ಕೆ ಬಿದ್ದು ನಷ್ಟವಾಗುತ್ತಿದೆ. ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲೂ ಸಾಧ್ಯವಾಗುತ್ತಿಲ್ಲ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಖರೀದಿದಾರರಿಂದ ಮೋಸ’

‘ಬ್ರೆಜಿಲ್‌ನಲ್ಲಿ ಉತ್ತಮ ಮಳೆ ಆಗಿದ್ದಕ್ಕೆ ಭಾರತದಲ್ಲಿ ಕಾಫಿ ಧಾರಣೆ ಕುಸಿಯುತ್ತಿದೆ ಎಂದು ಖರೀದಿದಾರರು ವಾದಿಸುತ್ತಿದ್ದಾರೆ. ಅಲ್ಲಿ ಈಗ ಮಳೆ ಸುರಿದಿದ್ದರೆ ಮುಂದಿನ ವರ್ಷದ ಫಸಲಿಗೆ ಅನುಕೂಲ. ಬ್ರೆಜಿಲ್‌ನಲ್ಲಿ ಸುರಿದ ಮಳೆಗೂ ದೇಶದಲ್ಲಿ ದರ ಇಳಿಕೆಗೆ ಸಂಬಂಧ ಇಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಕಾಫಿ ಮಾರಾಟ ನಡೆಯುತ್ತಿದೆ. ಸ್ಥಳೀಯ ಖರೀದಿದಾರರು ಹಾಗೂ ಕಾಫಿ ಕ್ಯೂರಿಂಗ್‌ ಮಾಲೀಕರೇ ದರ ಇಳಿಸಿ ಮೋಸ ಎಸಗುತ್ತಿದ್ದಾರೆ’ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಸಣ್ಣುವಂಡ ಕಾವೇರಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.