ADVERTISEMENT

ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರನ್ ಇನ್ನಿಲ್ಲ

ನಿಧನ ವಾರ್ತೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 21:26 IST
Last Updated 13 ಏಪ್ರಿಲ್ 2020, 21:26 IST
ರಾಜಶೇಖರನ್‌
ರಾಜಶೇಖರನ್‌   

ಬೆಂಗಳೂರು: ಕಾಂಗ್ರೆಸ್ಸಿನ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರನ್‌ ಅವರು ಜಯನಗರದಲ್ಲಿರುವ ಅಪೊಲೊ ಆಸ್ಪತ್ರೆಯಲ್ಲಿ ಸೋಮವಾರ ಬೆಳಿಗ್ಗೆ ನಿಧನರಾದರು.

ಹಲವು ತಿಂಗಳುಗಳಿಂದ ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ 92 ವರ್ಷವಾಗಿತ್ತು. ಅವರಿಗೆ ಪತ್ನಿ ಗಿರಿಜಾ ರಾಜಶೇಖರನ್‌, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ.

1928ರ ಸೆ. 12ರಂದು ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮರಳವಾಡಿಯಲ್ಲಿ ಜನಿಸಿದ್ದ ರಾಜಶೇಖರನ್, ಸಜ್ಜನ, ಮೌಲ್ಯಾಧಾರಿತ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಉತ್ತಮ ಸಂಸದೀಯ ಪಟು ಆಗಿದ್ದರು.

ADVERTISEMENT

1953ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ವ್ಯಾಸಂಗ ಮುಗಿಸುವ ಮೊದಲೇ ತಮ್ಮ ತಂದೆಯ ಅಕಾಲ ಮರಣದಿಂದ ಮರಳವಾಡಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡು, ಪ್ರಗತಿಪರ ರೈತ ಎನಿಸಿಕೊಂಡಿದ್ದರು. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ನಾಲ್ಕನೆಯ ಮಗಳು ಗಿರಿಜಾ ಅವರನ್ನು 1959ರಲ್ಲಿ ರಾಜಶೇಖರ್‌ ವಿವಾಹವಾಗಿದ್ದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಡೆದ ಮೈಸೂರು ಚಲೋ ಚಳವಳಿಯಲ್ಲಿಯೂ ಪಾಲ್ಗೊಂಡಿದ್ದ ರಾಜಶೇಖರನ್, ನಂತರ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 1967ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1999ರಲ್ಲಿ ವಿಧಾನಪರಿಷತ್ ಸದಸ್ಯ, 2002ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. ಮನಮೋಹನ್‌ ಸಿಂಗ್‌ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಯೋಜನೆ ಮತ್ತು ಸಾಂಖ್ಯಿಕ ರಾಜ್ಯ ಸಚಿವರಾಗಿದ್ದರು.

ರಾಜಶೇಖರನ್ ಅವರು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಗ್ರಾಮೀಣ ಅಭಿವೃದ್ಧಿ ಕುರಿತಂತೆ 100ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ಅವರ ಏಷ್ಯಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗ್ರಾಮೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ. ಸರಳತೆ, ಸಜ್ಜನಿಕೆ, ತಾಳ್ಮೆಗಳನ್ನು ರೂಢಿಸಿಕೊಂಡಿದ್ದ ಅವರು, ಮಹಾತ್ಮ ಗಾಂಧೀಜಿ ಹೇಳಿದ ಜೀವನ ಮೌಲ್ಯಗಳನ್ನು ಪಾಲಿಸುತ್ತಿದ್ದರು.

ಅಂತ್ಯಕ್ರಿಯೆ ಮರಳವಾಡಿ ದೇವರಹಳ್ಳಿ ರಸ್ತೆಯಲ್ಲಿನ ಅವರ ತೋಟದಲ್ಲಿ ಸೋಮವಾರ ಮಧ್ಯಾಹ್ನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.